ವಾಣಿಜ್ಯ

ಆನ್ ಲೈನ್ ವಹಿವಾಟು ವಂಚನೆ: ನಷ್ಟ ತಪ್ಪಿಸಿಕೊಳ್ಳಲು ಗ್ರಾಹಕರು 3 ದಿನಗಳೊಳಗೆ ಬ್ಯಾಂಕ್ ಗೆ ಮಾಹಿತಿ ನೀಡಬೇಕು: ಆರ್ ಬಿಐ

Srinivasamurthy VN

ನವದೆಹಲಿ: ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಸೇರಿದಂತೆ ಆನ್​ಲೈನ್ ವಹಿವಾಟಿನಲ್ಲಿ ಹೆಚ್ಚುತ್ತಿರುವ ವಂಚನೆಗೆ ಕಡಿವಾಣ ಹಾಕಲು ಮುಂದಾಗಿರುವ ಭಾರತೀಯ ರಿಸರ್ವ್ ಬ್ಯಾಂಕ್ ವಂಚನೆಯ ವಹಿವಾಟುಗಳಲ್ಲಿ ಗ್ರಾಹಕರ  ಹೊಣೆಗಾರಿಕೆಯನ್ನು ಮಿತಿಗೊಳಿಸಿ ಮಾರ್ಗದರ್ಶಿ ಸೂತ್ರಗಳನ್ನು ಪರಿಷ್ಕರಿಸಿದೆ.

ಎಲೆಕ್ಟ್ರಾನಿಕ್ ಬ್ಯಾಂಕಿಂಗ್ ನಡೆಸುವ ಗ್ರಾಹಕರಿಗೆ ಬ್ಯಾಂಕ್ ​ಗಳೇ ಸುರಕ್ಷತೆಯ ವ್ಯವಸ್ಥೆ ಕಲ್ಪಿಸಬೇಕು ಎಂದಿರುವ ರಿಸರ್ವ್ ಬ್ಯಾಂಕ್, ವಹಿವಾಟಿನಲ್ಲಿ ಬ್ಯಾಂಕ್​ನಿಂದ ನಿರ್ಲಕ್ಷ್ಯವಾಗಿ ಗ್ರಾಹಕ ಅದನ್ನು ಬ್ಯಾಂಕ್ ಗಮನಕ್ಕೆ ತಂದರೂ  ಅಥವಾ ತರದೇ ಇದ್ದರೂ ಆತನ ಹೊಣೆಗಾರಿಕೆ ಶೂನ್ಯ ಎಂಬ ಮಹತ್ವದ ಅಂಶಗಳು ಪರಿಷ್ಕೃತ ಸೂತ್ರಗಳಲ್ಲಿ ಸೇರ್ಪಡೆಯಾಗಿವೆ. ಅಂತೆಯೇ ಎಲೆಕ್ಟ್ರಾನಿಕ್ ಬ್ಯಾಂಕಿಂಗ್ ವಹಿವಾಟುಗಳ ಸಲುವಾಗಿ ಕಡ್ಡಾಯವಾಗಿ ಎಸ್​ಎಂಎಸ್  ಅಲರ್ಟ್ ಪಡೆಯಲು ಗ್ರಾಹಕರು ತಮ್ಮ ಮೊಬೈಲ್ ಸಂಖ್ಯೆಯನ್ನು ನೋಂದಣಿ ಮಾಡಿಕೊಳ್ಳಬೇಕು ಮತ್ತು ಇಂತಹ ಗ್ರಾಹಕರಿಗೆ ಎಸ್​ಎಂಎಸ್​ ಸೌಲಭ್ಯವನ್ನು ಬ್ಯಾಂಕ್​ಗಳು ಕಡ್ಡಾಯವಾಗಿ ಕಲ್ಪಿಸಬೇಕು. ಇ-ಮೇಲ್ ಇದ್ದಲ್ಲಿ ಅದಕ್ಕೂ  ಅಲರ್ಟ್ ಸಂದೇಶ ಕಳುಹಿಸಬಹುದು ಎಂದು ಆರ್​ಬಿಐ ತಿಳಿಸಿದೆ.

ಆರ್ ಬಿಐ ನೂತನ ಪರಿಷ್ಕೃತ ಸೂತ್ರಗಳು ಇಂತಿವೆ.
1. ಒಂದು ವೇಳೆ ಗ್ರಾಹಕನಿಗೆ ತನಗೆ ವಂಚನೆಯಾಗಿದೆ ಎಂದು ತಿಳಿದರೆ ಮೂರು ದಿನಗಳೊಳಗಾಗಿ ಸಂಬಂಧ ಪಟ್ಟ ಬ್ಯಾಂಕ್ ಗೆ ಮಾಹಿತಿ ನೀಡಬೇಕು.
2. ಮೂರನೇ ವ್ಯಕ್ತಿಯಿಂದ ವಂಚನೆಯಾದ ಸಂದರ್ಭದಲ್ಲಿ ಬ್ಯಾಂಕ್​ನಿಂದ ಸೂಚನೆ ಬಂದ ಬಳಿಕ ಮೂರು ದಿನಗಳ ಒಳಗಾಗಿ ಗ್ರಾಹಕ ಅದಕ್ಕೆ ಉತ್ತರಿಸದೇ ಇದ್ದರೆ (ಬ್ಯಾಂಕ್ ಅಥವಾ ಗ್ರಾಹಕನಿಂದ ನ್ಯೂನತೆ ಇಲ್ಲದೇ ಇದ್ದರು ಕೂಡ)  ಅದರ ಹೊಣೆಗಾರಿಕೆ ಕೂಡ ಗ್ರಾಹಕನದ್ದೆ ಆಗಿರುತ್ತದೆ.
3. ಎಲೆಕ್ಟ್ರಾನಿಕ್ ಬ್ಯಾಂಕಿಂಗ್ ವಹಿವಾಟು ನಡೆಸುವ ಗ್ರಾಹಕರಿಗೆ ಸುರಕ್ಷತೆಯ ವ್ಯವಸ್ಥೆಯನ್ನು ಬ್ಯಾಂಕ್​ಗಳು ಕಲ್ಪಿಸಬೇಕು.
4. ವಂಚನೆ ವಹಿವಾಟು ಪ್ರಕರಣದಲ್ಲಿ ಬ್ಯಾಂಕಿನಿಂದ ನಿರ್ಲಕ್ಷ್ಯವಾಗಿದ್ದಲ್ಲಿ, ಇಂತಹ ವಹಿವಾಟಿನ ಬಗ್ಗೆ ಗ್ರಾಹಕರು ಬ್ಯಾಂಕಿನ ಗಮನಕ್ಕೆ ತರಲಿ ಅಥವಾ ತರದೇ ಇರಲಿ, ಆತನ ಹೊಣೆಗಾರಿಕೆ ಶೂನ್ಯ.
5. ಅನಧಿಕೃತ ವಹಿವಾಟು ನಡೆದ ಬಗ್ಗೆ ವ್ಯಕ್ತಿಯೊಬ್ಬ ಏಳು ಕೆಲಸದ ದಿನಗಳ ಒಳಗಾಗಿ ವರದಿ ಮಾಡಿದಲ್ಲಿ ಗ್ರಾಹಕನ ಹೊಣೆಗಾರಿಕೆಯನ್ನು 25,000 ರೂಪಾಯಿಗಳಿಗೆ ಮಿತಿಗೊಳಿಸಬೇಕು ಎಂದು ಆರ್ ಬಿಐ ಹೇಳಿದೆ.

ಜುಲೈ10ಕ್ಕೆ ಜಿಎಸ್​ಟಿ ರಹಿತ ಗೋಲ್ಡ್ ಬಾಂಡ್ ಬಿಡುಗಡೆ
ಇದೇ ವೇಳೆ ಕೇಂದ್ರ ಸರ್ಕಾರ ಸವರಿನ್ ಗೋಲ್ಡ್ ಬಾಂಡ್​ ಗಳನ್ನು ಇದೇ ಜುಲೈ 10ರಂದು ಬಿಡುಗಡೆ ಮಾಡಲಿದ್ದು, ಇದು ಪ್ರಸ್ತುತ ವಿತ್ತ ವರ್ಷದಲ್ಲಿ ಎರಡನೇ ಬಾರಿಗೆ ಬಿಡುಗಡೆಯಾಗುತ್ತಿರುವ ಗೋಲ್ಡ್ ಬಾಂಡ್ ಆಗಿದೆ. ಒಟ್ಟಾರೆ  ಚಿನ್ನದ ಬಾಂಡ್ ಸರಣಿಯಲ್ಲಿ ಒಂಭತ್ತನೆಯದಾಗಿದ್ದು, ಸರ್ಕಾರ ಜಾರಿಗೊಳಿಸಿರುವ ಶೇ.3ರಷ್ಟು ಸರಕು ಮತ್ತು ಸೇವಾ ತೆರಿಗೆಯಿಂದ (ಜಿಎಸ್ ಟಿ) ಈ ಗೋಲ್ಡ್ ಬಾಂಡ್ ಮುಕ್ತವಾಗಿರಲಿದೆ. ಹೀಗಾಗಿ ಇದರಲ್ಲಿ ಹಣ ವಿನಿಯೋಗಿಸುವ  ಹೂಡಿಕೆದಾರರಿಗೆ ಇದು ವರದಾನವಾಗಲಿದೆ.

SCROLL FOR NEXT