ವಾಣಿಜ್ಯ

ಜೂನ್ 16ರಿಂದ ಪೆಟ್ರೋಲ್, ಡೀಸೆಲ್ ದರ ನಿತ್ಯ ಪರಿಷ್ಕರಣೆ

Lingaraj Badiger
ನವದೆಹಲಿ: ಜೂನ್ 16ರಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯ ದರವನ್ನಾಧರಿಸಿ ದೇಶಾದ್ಯಂತ ಪ್ರತಿ ದಿನ ಪೆಟ್ರೋಲ್ ಮತ್ತು ಡೀಸೆಲ್ ದರ ಪರಿಷ್ಕರಣೆ ಮಾಡಲು ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ನಿರ್ಧರಿಸಿವೆ. 
ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಮೇ 1ರಿಂದ ಪ್ರಾಯೋಗಿಕವಾಗಿ ಐದು ನಗರಗಳಲ್ಲಿ ನಿತ್ಯ ತೈಲ ಬೆಲೆ ಪರಿಷ್ಕರಣೆ ಆರಂಭಿಸಿದ್ದು. ಅದು ಯಶಸ್ವಿಯಾದ ಹಿನ್ನೆಲೆಯಲ್ಲಿ ಜೂನ್ 16ರಿಂದ ದೇಶದಾದ್ಯಂತ ಜಾರಿ ಮಾಡುತ್ತಿವೆ.
ತೈಲ ಬೆಲೆ ನಿತ್ಯ ಪರಿಷ್ಕರಿಸುವುದರಿಂದ ಚಿಲ್ಲರೆ ದರಗಳ ಮೇಲೆ ಹೆಚ್ಚು ಪರಿಣಾಮ ಬೀರಲಿದೆ ಮತ್ತು ಇದು ಗ್ರಾಹಕರಿಗೆ ಹೊರೆಯಾಗುವುದಿಲ್ಲ. ದರ ನಿತ್ಯ ಪರಿಷ್ಕರಿಸುವುದರಿಂದ ವ್ಯವಸ್ಥೆಯಲ್ಲಿ ಹೆಚ್ಚು ಪಾರದರ್ಶಕತೆ ಇರುತ್ತದೆ. ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಈ ವ್ಯವಸ್ಥೆ ಈಗಾಗಲೇ ಜಾರಿಯಲ್ಲಿದ್ದು, ಇದೀಗ ಭಾರತದಲ್ಲೂ ಅದನ್ನು ಜಾರಿಗೊಳಿಸಲಾಗುತ್ತಿದೆ ಎಂದು ಸರ್ಕಾರಿ ಸ್ವಾಮ್ಯದ ಭಾರತೀಯ ತೈಲ ಕಂಪನಿಗಳು ಪ್ರಕಟಣೆಯಲ್ಲಿ ತಿಳಿಸಿವೆ.
ಮೇ 1ರಿಂದ ಪುದುಚೇರಿ, ವೈಝಾಗ್‌, ಉದಯ್‌ಪುರ್, ಜಮ್‌ಷೆಡ್ಪುರ್ ಹಾಗೂ ಚಂಡೀಗಢದಲ್ಲಿ ನಿತ್ಯ ತೈಲ ಬೆಲೆ ಪರಿಷ್ಕರಣೆ ಜಾರಿಗೆ ತರಲಾಗಿತ್ತು.
ಜಾಗತಿಕ ತೈಲ ಮಾರುಕಟ್ಟೆ ಹಾಗೂ ರೂಪಾಯಿ ಮೌಲ್ಯದ ಏರಿಳಿತವನ್ನು ಗಮನಿಸಿ ಪ್ರಸ್ತುತ ಹದಿನೈದು ದಿನಗಳಿಗೊಮ್ಮೆ ತೈಲ ಬೆಲೆಯಲ್ಲಿ ಪರಿಷ್ಕರಣೆ ಮಾಡಲಾಗುತ್ತಿದ್ದು, ಇನ್ನು ಮುಂದೆ ತೈಲ ಬೆಲೆ ನಿತ್ಯ ಪರಿಷ್ಕರಣೆಯಾಗಲಿದೆ.
ಸರ್ಕಾರಿ ಸ್ವಾಮ್ಯದ ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌, ಭಾರತ್‌ ಪೆಟ್ರೋಲಿಯಂ ಹಾಗೂ ಹಿಂದೂಸ್ತಾನ್‌ ಪೆಟ್ರೋಲಿಯಂ ದೇಶದಲ್ಲಿ ಶೇ.90ರಷ್ಟು ತೈಲ ಪೂರೈಕೆ ಮಾಡುತ್ತಿವೆ.
SCROLL FOR NEXT