ನವದೆಹಲಿ: ಜನ್ ಧನ್ ಖಾತೆಗಳ ನಿರ್ವಹಣಾ ವೆಚ್ಚಗಳನ್ನು ಸರಿದೂಗಿಸಲು ಕನಿಷ್ಟ ಠೇವಣಿ ನಿರ್ವಹಣೆ ಮಾಡದ ಎಸ್ ಬಿಐ ಉಳಿತಾಯ ಖಾತೆಗಳ ಮೇಲೆ ದಂಡ ವಿಧಿಸಲಾಗುತ್ತದೆ ಎಂದು ಎಸ್ ಬಿಐ ಮುಖ್ಯಸ್ಥೆ ಅರುಂಧತಿ ಭಟ್ಟಾಚಾರ್ಯ ಅವರು ಗುರುವಾರ ಹೇಳಿದ್ದಾರೆ.
ದೆಹಲಿಯಲ್ಲಿ ಮಹಿಳಾ ಉದ್ಯಮಿಗಳ ರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡಿದ ಅರುಂಧತಿ ಭಟ್ಟಾಚಾರ್ಯ ಅವರು, "ಶೂನ್ಯ ಠೇವಣಿಯ ಜನ್ ಧನ್ ಯೋಜನೆ ಜಾರಿಗೆ ಬಂದ ಬಳಿಕ ದೇಶಾದ್ಯಂತ ಸುಮಾರು 270 ಮಿಲಿಯನ್ ಖಾತೆಗಳು ನಿರ್ವಹಣೆಯಾಗುತ್ತಿದ್ದು, ಸರ್ಕಾರಿ ಸ್ವಾಮ್ಯದ ಎಸ್ ಬಿಐ ನಲ್ಲಿ ಗರಿಷ್ಠ ಖಾತೆಗಳು ನಿರ್ವಹಣೆಯಾಗುತ್ತಿದೆ. ಹೀಗಾಗಿ ಜನ್ ಧನ್ ಖಾತೆಗಳ ನಿರ್ವಹಣೆಗಾಗಿ 11 ಕೋಟಿಯಷ್ಟು ಹೊರೆಯಾಗುತ್ತಿದ್ದು, ಇದನ್ನು ಸರಿದೂಗಿಸಲು ಕನಿಷ್ಟ ಠೇವಣಿ ನಿರ್ವಹಣೆ ಮಾಡದ ಉಳಿತಾಯ ಖಾತೆಗಳ ಮೇಲೆ ದಂಡ ವಿಧಿಸಲು ನಿರ್ಧರಿಸಲಾಗಿದೆ. ಈ ದಂಡದ ಹಣದ ಮೂಲಕ ಜನ್ ಧನ್ ಖಾತೆಗಳ ನಿರ್ವಹಣೆ ಮಾಡಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.
ಖಾಸಗಿ ಬ್ಯಾಂಕುಗಳಲ್ಲಿ ಈ ನಿಯಮ ಈಗಾಗಲೇ ಚಾಲ್ತಿಯಲ್ಲಿದೆ. 2012ರಲ್ಲಿ ಎಸ್ ಬಿಐ ಮಾತ್ರ ಈ ನಿಯಮವನ್ನು ರದ್ದುಗೊಳಿಸಿತ್ತು. ಇದೀಗ ಅನಿವಾರ್ಯ ಕಾರಣಗಳಿಂದಾಗಿ ಈ ನಿಯಮವನ್ನು ಮತ್ತೆ ಜಾರಿಗೆ ತರಲಾಗುತ್ತಿದೆ. ಎಸ್ ಬಿಐ ನ ಈ ನಿಯವ ಜನ್ ಧನ್ ಖಾತೆಗಳಿಗೆ ಅನ್ವಯವಾಗುವುದಿಲ್ಲ. ಬೇರೆ ಬ್ಯಾಂಕ್ ಗಳೊಂದಿಗೆ ಹೋಲಿಕೆ ಮಾಡಿದರೆ ಎಸ್ ಬಿಐ ವಿಧಿಸುತ್ತಿರುವ ದಂಡ ಸಣ್ಣ ಪ್ರಮಾಣದ್ದಾಗಿದೆ ಅಂತೆಯೇ ಇತರೆ ಬ್ಯಾಂಕ್ ಗಳ ಕಡ್ಡಾಯ ಕನಿಷ್ಟ ಠೇವಣಿ ಕೂಡ ಕಡಿಮೆ ಇದೆ ಎಂದೂ ಅರುಂಧತಿ ಭಟ್ಟಾಚಾರ್ಯ ಸ್ಪಷ್ಟಪಡಿಸಿದರು.
ಇತ್ತೀಚೆಗಷ್ಟೇ ಹೊಸ ನಿಯಮವನ್ನು ಘೋಷಣೆ ಮಾಡಿದ್ದ ಎಸ್ ಬಿಐ, ಠೇವಣಿ ನಿರ್ವಹಣೆ ಮಾಡದ ಉಳಿತಾಯ ಖಾತೆಗಳಿಗೆ ದಂಡ ಹೇರುವ ನಿಯಮ ಘೋಷಣೆ ಮಾಡಿತ್ತು. ಅದರಂತೆ ಉಳಿತಾಯ ಖಾತೆದಾರರು ಖಾತೆಯಲ್ಲಿ ಕನಿಷ್ಟ ಹಣ ಇಡಬೇಕಿದೆ. ಮೆಟ್ರೋ ನಗರಗಳ ಖಾತೆದಾರರು ಕನಿಷ್ಟ 5 ಸಾವಿರ, ನಗರ ಪ್ರದೇಶದ ಖಾತೆದಾರರು ಕನಿಷ್ಟ 3 ಸಾವಿರ ಮತ್ತು ಅರೆ ನಗರ ಪ್ರದೇಶಗಳಲ್ಲಿನ ಖಾತೆದಾರರು ಕನಿಷ್ಟ 2 ಸಾವಿರ, ಗ್ರಾಮೀಣ ಭಾಗದ ಎಸ್ ಬಿಐ ಉಳಿತಾಯ ಖಾತೆದಾರರು ಕನಿಷ್ಟ 1 ಸಾವಿರ ಹಣವನ್ನು ತಮ್ಮ ತಮ್ಮ ಖಾತೆಯಲ್ಲಿ ಠೇವಣಿ ಇಡಬೇಕಿದೆ. ಈ ನಿಯಮ ಇದೇ ಏಪ್ರಿಲ್ 1ರಿಂದ ಜಾರಿಯಾಗಲಿದ್ದು, ಕನಿಷ್ಟ ಠೇವಣಿ ಇರದ ಖಾತೆಗಳಿಗೆ ಆಯಾ ಖಾತೆಯಲ್ಲಿನ ಹಣದ ಪ್ರಮಾಣಕ್ಕೆ ಅನುಗುಣವಾಗಿ ದಂಡ ವಿಧಿಸಲಾಗುತ್ತದೆ ಎಂದು ಎಸ್ ಬಿಐ ಹೇಳಿತ್ತು.
ಕನಿಷ್ಟ ಠೇವಣಿ ಹಣ ನಿರ್ವಹಣೆ ಮಾಡದ ಉಳಿತಾಯ ಖಾತೆಗಳ ಮೇಲೆ ದಂಡ ವಿಧಿಸುವ ಈ ನಿಯಮವನ್ನು ಪುನರ್ ಜಾರಿ ಮಾಡುವ ಎಸ್ ಬಿಐ ಕ್ರಮಕ್ಕೆ ದೇಶಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಅಲ್ಲದೆ ವ್ಯಾಪಕೆ ಚರ್ಚೆಗೂ ಕಾರಣವಾಗುತ್ತಿದ್ದು, ಇದೇ ಕಾರಣಕ್ಕೆ ಕೇಂದ್ರ ಸರ್ಕಾರ ಪ್ರಸ್ತುತ ಈ ನಿಯಮವನ್ನು ಸಡಿಲಗೊಳಿಸುವಂತೆ ಎಸ್ ಬಿಐ ಮನವೊಲಿಸಲು ಮುಂದಾಗಿದೆ.