ಕುಂಭಕೋಣಂ: ಹೊಸ ಮುಖಬೆಲೆಯ ನೋಟುಗಳನ್ನು ಪರಿಚಯಿಸುವ ಯೋಜನೆ ಇಲ್ಲ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಹಿರಿಯ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.
ಸದ್ಯಕ್ಕೆ ಹೊಸ ಮುಖಬೆಲೆಯ ನೋಟುಗಳನ್ನು ಪರಿಚಯಿಸುವ ಪ್ರಸ್ತಾವನೆ ಇಲ್ಲ. ಬದಲಾಗಿ ನಗದು ರಹಿತ ವಹಿವಾಟುಗಳನ್ನು ಉತ್ತೇಜಿಸುವುದರತ್ತ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗಮನವನ್ನು ಕೇಂದ್ರೀಕರಿಸಲಿದೆ ಎಂದು ಆರ್ ಬಿಐ ಡೆಪ್ಯುಟಿ ಗೌರ್ನರ್ ಹೇಳಿದ್ದಾರೆ.
ಈ ಬಗ್ಗೆ ಸಂಸತ್ ನಲ್ಲಿ ಚರ್ಚೆ ನಡೆದಿದ್ದಾಗ ಹಣಕಾಸು ಇಲಾಖೆಯ ರಾಜ್ಯ ಸಚಿವ ಅರ್ಜುನ್ ರಾಮ್ ಮೇಘ್ ವಾಲ್ ಸಹ ಸ್ಪಷ್ಟನೆ ನೀಡಿ 5000, 10000 ರೂ ಮುಖಬೆಲೆಯ ನೋಟುಗಳನ್ನು ಪರಿಚಯಿಸುವ ಉದ್ದೇಶವಿಲ್ಲ ಎಂದು ಹೇಳಿದ್ದರು. ಇದಕ್ಕೆ ಪೂರಕವಾಗಿ ಆರ್ ಬಿಐ ಸಹ ಸ್ಪಷ್ಟನೆ ನೀಡಿದ್ದು, ಹೊಸ ಮುಖಬೆಲೆಯ ನೋಟಿನ ಪ್ರಸ್ತಾವನೆಯನ್ನು ಅಲ್ಲಗಳೆದಿದೆ.