ನವದೆಹಲಿ: 2017-18ನೇ ಸಾಲಿನ ಆದಾಯ ತೆರಿಗೆ ಮರುಪಾವತಿಗೆ ಎಲ್ಲಾ ವರ್ಗಗಳಲ್ಲಿ ಇ-ಫೈಲಿಂಗ್ ಸೌಲಭ್ಯವನ್ನು ಆದಾಯ ತೆರಿಗೆ ಇಲಾಖೆ ಇಂದು ಸಕ್ರಿಯಗೊಳಿಸಿದೆ.
ತೆರಿಗೆ ಇಲಾಖೆಯ ಇ-ಪೋರ್ಟಲ್ http://incometaxindiaefiling.gov.in ನಲ್ಲಿ ತೆರಿಗೆ ಪಾವತಿಸಲು ಹೊಸ ಐಟಿಆರ್ ಗಳು ಸಿಗುತ್ತವೆ.ಇಲಾಖೆಯ ವೆಬ್ ಸೈಟ್ ನಲ್ಲಿ ಇ-ಫೈಲಿಂಗ್ ಗೆ ಎಲ್ಲಾ ಐಟಿಆರ್ ಗಳು ಲಭ್ಯವಿರುತ್ತವೆ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತೆರಿಗೆ ಪಾವತಿದಾರರು ಇ-ಫೈಲಿಂಗ್ ಮಾಡುವ ಮುನ್ನ ಕಳೆದ ವರ್ಷ ಸಲ್ಲಿಸಿದ ಐಟಿಆರ್ ನ ಪ್ರತಿ, ಬ್ಯಾಂಕ್ ಹೇಳಿಕೆಗಳು, ಟಿಡಿಎಸ್ ಮತ್ತು ಉಳಿತಾಯ ಸರ್ಟಿಫಿಕೇಟ್ ಗಳು, ಫಾರ್ಮ್ 60 ಮತ್ತು ಇತರ ಬಡ್ಡಿ ಪಾವತಿಸಿದ ಸಂಬಂಧಪಟ್ಟ ದಾಖಲೆಗಳನ್ನು ಯನ್ನು ಸಿದ್ಧವಾಗಿಟ್ಟುಕೊಳ್ಳಬೇಕು.
ಆಧಾರ್ ಸಂಖ್ಯೆ ಮೂಲಕ ಐಟಿಆರ್ ನ ಇ-ಪರಿಶೀಲನೆ ಮಾಡಿಕೊಳ್ಳಬಹುದು. ಈ ವರ್ಷ ಆಧಾರ್ ಸಂಖ್ಯೆ ಮೂಲಕ ಈಗಾಗಲೇ 2,59,831 ಐಟಿಆರ್ ಗಳನ್ನು ಇ-ಪರಿಶೀಲನೆಗೊಳಪಡಿಸಲಾಗಿದೆ.
ಸರ್ಕಾರ ಹಣಕಾಸು ಕಾಯ್ದೆ 2017ರ ಪ್ರಕಾರ, ತೆರಿಗೆ ಪಾವತಿದಾರರು ಐಟಿಆರ್ ಗಳ ಸಲ್ಲಿಕೆಗೆ ಆಧಾರ್ ಸಂಖ್ಯೆ ಕಡ್ಡಾಯ ಮಾಡಿದೆ. ಜುಲೈ 1ರಿಂದ ಪ್ಯಾನ್ ಸಂಖ್ಯೆಗೆ ಅರ್ಜಿ ಸಲ್ಲಿಸಲು ಕೂಡ ಆಧಾರ್ ಸಂಖ್ಯೆ ಕಡ್ಡಾಯವಾಗಿ ಬೇಕಾಗಿದೆ.ಐಟಿಆರ್ ನ್ನು ಜುಲೈ 31ರವರೆಗೆ ಸಲ್ಲಿಸಬಹುದು.