ಜಗತ್ತಿಗೆ ಜಗತ್ತೇ ಬ್ರೆಝಿಲ್ , ರಷ್ಯಾ ,ಇಂಡಿಯಾ , ಚೀನಾ ಮತ್ತು ಸೌತ್ ಆಫ್ರಿಕಾ ಎನ್ನುವ ದೇಶಗಳನ್ನ ಬ್ರಿಕ್ಸ್ ದೇಶಗಳು ಎಂದು ಕರೆದು , ಇವು ಜಗತ್ತಿನ ಮುಂದಿನ ಆರ್ಥಿಕತೆಯ ಸರದಾರರು ಎಂದಿತು . ಅದು ಪೂರ್ಣ ಸುಳ್ಳು ಅಂತಲ್ಲ , ಆದರೆ ಆಫ್ರಿಕಾ ಖಂಡದ ಹಲವು ದೇಶಗಳು ವಿಶ್ವ ಹೂಡಿಕೆದಾರರ ಹೊಸ ಡಾರ್ಲಿಂಗ್ ಆಗಿದೆ . ಹೂಡಿಕೆದಾರರ ವಲಯದಲ್ಲಿ ಈ ದೇಶಗಳನ್ನ ಆಫ್ರಿಕನ್ ಲಯನ್ಸ್ ಎನ್ನುತ್ತಾರೆ . ಇವತ್ತಿನ ಲೇಖನದಲ್ಲಿ ನಾವು ಬೋಟ್ಸ್ವಾನ ಎನ್ನುವ ಕಡು ಬಡತನದಲ್ಲಿ ಬೇಯುತಿದ್ದ ದೇಶ ಹೇಗೆ ವಿಶ್ವದ ಗಮನ ಸೆಳೆಯುವ ಮಟ್ಟಕ್ಕೆ ಬೆಳೆದಿದೆ ಎನ್ನುವ ಆರ್ಥಿಕ ಯಶೋಗಾಥೆ ತಿಳಿಯೊಣ .
ಬೋಟ್ಸ್ವಾನ ಆಫ್ರಿಕಾ ಖಂಡದ ಒಂದು ದೇಶ . ದಕ್ಷಿಣ ಆಫ್ರಿಕಾ ದೇಶಕ್ಕೆ ಸರಹದ್ದು ಹಂಚಿಕೊಂಡಿರುವ ಈ ಪುಟ್ಟ ದೇಶದ ಜನಸಂಖ್ಯೆ 22 ಲಕ್ಷ . ಈ ದೇಶದ ನೆಲದ ಎಪ್ಪತ್ತು ಭಾಗ ಮರಳುಗಾಡು . 1966 ರಲ್ಲಿ ಬ್ರಿಟಿಷರಿಂದ ಸ್ವತಂತ್ರ ಪಡೆದಾಗ ಇಲ್ಲಿನ ಜನರ ವಾರ್ಷಿಕ ತಲಾದಾಯ 70 ಡಾಲರ್ ಅಂದರೆ ವರ್ಷಕ್ಕೆ 1300 ರೂಪಾಯಿ ಆಸುಪಾಸು . ಛೆ .. ಎಂದು ಅವರ ಬಗ್ಗೆ ಮರುಗದಿರಿ ಇಂದಿನ ಅವರ ವಾರ್ಷಿಕ ತಲಾದಾಯ ಹತ್ತಿರ ಹತ್ತಿರ 20 ಸಾವಿರ ಡಾಲರ್ ಅಂದರೆ 13 ಲಕ್ಷದ ಆಸುಪಾಸು .. ಅಚ್ಚರಿಯಾಯ್ತಾ ? ಇದು ಯಾವುದೋ ಚಲನಚಿತ್ರದ ಕಥೆಯಲ್ಲ , ಆಫ್ರಿಕಾ ಖಂಡದ ಹಲವು ದೇಶಗಳ ಯಶೋಗಾಥೆ . ಬೋಟ್ಸ್ವಾನ ಅವರೆಲ್ಲರ ನಾಯಕನಂತೆ ಮುಂದಿನ ಸಾಲಿನಲ್ಲಿ ನಿಂತಿದೆ .
ಈ ಪರಿಯ ಯಶಸ್ಸು ಪಡೆಯಲು ಅವರೇನು ಮಾಡಿದರು ?
ಎಲ್ಲಕ್ಕೂ ಮೊದಲು ಪಾರದರ್ಶಕತೆ ಇವರ ಯಶಸ್ಸಿನ ಬಂಡವಾಳ . ಅಂದರೆ ಅಲ್ಲಿ ಕದ್ದು ಮುಚ್ಚಿ ಮಾಡಲು ಏನೂ ಇಲ್ಲ ಎಲ್ಲಕ್ಕೂ ಇಂತಿಷ್ಟು ಎನ್ನುವ ತೆರಿಗೆ ಉಂಟು , ವ್ಯಾಪಾರ ತೆರೆಯಲು ಸರಳ ನೀತಿಗಳಿವೆ ಅವನ್ನ ಅನುಸರಿಸಿ ಯಾರು ಬೇಕಾದರೂ ವ್ಯಾಪಾರ ಶುರು ಮಾಡಬಹದು . ಮತ್ತೊಂದು ಮುಖ್ಯ ಕಾರಣ ಲಂಚಗುಳಿತನ ಅಥವಾ ಕರಪ್ಶನ್ ಇಲ್ಲ ಎನ್ನುವಷ್ಟು , ಎಷ್ಟೋ ಯೂರೋಪಿಯನ್ ದೇಶಗಳಿಗಿಂತ ಉತ್ತಮ ಎನ್ನಿಸುವಷ್ಟು ಎಂದರೆ ಆಶ್ಚರ್ಯ ಆಗಬಹದು ಆದರೆ ಇದು ನಿಜ .
ಅಲ್ಲದೆ ಜೇಬಿಗೆ ಹೆಚ್ಚು ಭಾರವಲ್ಲದ ತೆರಿಗೆ ನೀತಿ ಜಗತ್ತಿನ ಹಲವು ಕಂಪನಿಗಳು ಅತ್ತ ಮುಖ ಮಾಡುವಂತೆ ಮಾಡಿದೆ . ಸರ್ಟಿಫೈಡ್ ಫೈನಾನ್ಸಿಯಲ್ ಸರ್ವಿಸ್ ಸೆಂಟರ್(IFSC ) ಕಂಪನಿಗಳು ಹಲವು ವಿನಾಯ್ತಿ ಹೊಂದಿವೆ . ಈ ಕಂಪನಿಗಳು ಕಾರ್ಪೊರೇಟ್ ಟ್ಯಾಕ್ಸ್ ಕೇವಲ 15 ಪ್ರತಿಶತ. ವ್ಯಾಲ್ಯೂ ಆಡೆಡ್ ಟ್ಯಾಕ್ಸ್ ಅಥವಾ VAT ಸೊನ್ನೆ, ಕ್ಯಾಪಿಟಲ್ ಗೈನ್ ತೆರಿಗೆಯಿಂದ ಮುಖ್ತ . ವಿಥ್ ಹೋಲ್ಡ್ ಟ್ಯಾಕ್ಸ್ ಕೂಡ ವಿನಾಯ್ತಿ ಹೊಂದಿದೆ . ಆಕಸ್ಮಾತ್ ನಿಮ್ಮದು IFSC ಕಂಪನಿ ಅಲ್ಲದಿದ್ದರೂ ಕಾರ್ಪೊರೇಟ್ ಟ್ಯಾಕ್ಸ್ ಹೆಚ್ಚೇನಿಲ್ಲ 15 ರ ಬದಲು 22 ಪ್ರತಿಶತ. ಜಗತ್ತಿನ ಹಲವು ದೇಶಗಳಿಗಿಂತ ಬಹು ಕಡಿಮೆ.
ಅಂತಾರಾಷ್ಟ್ರೀಯ ಇನ್ಶೂರೆನ್ಸ್ ಕಂಪನಿಗಳಿಗೆ , ಇಂಟರ್ನ್ಯಾಷನಲ್ ಬ್ಯಾಂಕಿಂಗ್ ಕಂಪನಿಗಳು , ಬಿಸಿನೆಸ್ ಔಟ್ಸೌರ್ಸ್ (ಹೊರಗುತ್ತಿಗೆ ) ಕಾಲ್ ಸೆಂಟರ್ ಇವುಗಳು ಮತ್ತು ಅಂತರರಾಷ್ಟ್ರೀಯ ಕಂಪನಿಗಳ ಹೋಲ್ಡಿಂಗ್ ಕಂಪನಿಗಳಿಗೆ ಇದು ನೆಲೆಯಾಗುತ್ತಿದೆ .
ಹೂಡಿಕೆ ಯಾವ ಕ್ಷೇತ್ರದಲ್ಲಿ ಮಾಡಬಹುದು?
- ಮೆಡಿಕಲ್ ಟೂರಿಸಂ ವಾರ್ಷಿಕವಾಗಿ 20 ರಿಂದ 30 ಪ್ರತಿಶತ ಬೆಳೆಯುತ್ತ ಬರುತ್ತಿದೆ . ಇಂದಿಗೆ 100 ಬಿಲಿಯನ್ ಅಮೇರಿಕನ್ ಡಾಲರ್ ಮೀರಿದ ವಹಿವಾಟು ಹೊಂದಿರುವ ಕ್ಷೇತ್ರ . ಬೋಟ್ಸ್ವಾನ ತನ್ನ ದೇಶದಲ್ಲಿ ಈ ಕ್ಷೇತ್ರದಲ್ಲಿ ಹೆಚ್ಚು ಅನುದಾನ ನೀಡುವ ಬಯಕೆ ಹೊಂದಿದೆ . ಡೈಯಾಗ್ನೋಸ್ಟಿಕ್ ಮತ್ತು ಲ್ಯಾಬರೊಟರಿ ಗಳನ್ನ ತೆರೆಯಲು ಮುಖ್ತ ಅವಕಾಶವಿದೆ .
- ಹೊಸ ಆವಿಷ್ಕಾರ , ಸಂಶೋಧನಾ ಕ್ಷೇತ್ರಗಳಿಗೆ ಹೆಚ್ಚು ಉತ್ತೇಜನ.
- ಮೈನಿಂಗ್ , ಗಣಿಗಾರಿಕೆಯಲ್ಲಿ ಕೂಡ ಹೆಚ್ಚಿನ ಅವಕಾಶಗಳಿವೆ . ಡೈಮಂಡ್ ಕಟಿಂಗ್ , ಪಾಲಿಶಿಂಗ್ ಇವುಗಳಲ್ಲಿ ಕೂಡ ಹೂಡಿಕೆಗೆ ಮುಕ್ತ ಅವಕಾಶವಿದೆ . ಬೋಟ್ಸ್ವಾನ ದ ಹೆಚ್ಚು ಆರ್ಥಿಕತೆ ನಿಂತಿರುವುದು ಡೈಮಂಡ್ ಉದ್ಯಮದ ಮೇಲೆ . ಅಲ್ಲದ್ದೆ ಇವರ ಆರ್ಥಿಕತೆಯ ತೊಬತ್ತೈದಕ್ಕೂ ಹೆಚ್ಚು ಭಾಗ ಎಕ್ಸ್ಪೋರ್ಟ್ ನಿಂದ ಎನ್ನುವುದು ಗಮನಿಸಬೇಕಾದ ಅಂಶ .
- ಟೂರಿಸಂ ಇನ್ನೊಂದು ಅತಿ ಮುಖ್ಯ ಕ್ಷೇತ್ರ . ಇತರ ಆಫ್ರಿಕನ್ ದೇಶಗಳಂತೆ ಬೋಟ್ಸ್ವಾನ ಕೂಡ ದಟ್ಟ ಕಾಡು ಮತ್ತು ಅಲ್ಲಿನ ಪ್ರಾಣಿ ಪಶುಗಳನ್ನ ನೈಸರ್ಗಿಕವಾಗಿ ಪಡೆದು ಕೊಂಡಿದೆ ಅಷ್ಟೇ ಅಲ್ಲದೆ ಅದನ್ನ ಹೇಗೆ ತನ್ನ ಒಳಿತಿಗೆ ಬಳಸಿಕೊಳ್ಳಬೇಕು ಎನ್ನುವ ಅರಿವು ಕೂಡ ಅದಕ್ಕಿದೆ . ಹೀಗಾಗಿ ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರುತ್ತಲೇ ಸಾಗಿದೆ .
- ರಿಯಲ್ ಎಸ್ಟೇಟ್ ಕ್ಷೇತ್ರ ಕೂಡ ಉತ್ತಮ ಭವಿಷ್ಯ ಹೊಂದಿದೆ . ಬೋಟ್ಸ್ವಾನಾದ 66 ಪ್ರತಿಶತ ಜನ ಬದುಕುವುದು ನಗರ ಪ್ರದೇಶದಲ್ಲಿ . ನಗರೀಕರಣ ತೀವ್ರ ಗತಿಯಲ್ಲಿ ಆಗುತ್ತಿರುವುದರಿಂದ ಈ ಕ್ಷೇತ್ರ ಕೂಡ ಅಷ್ಟೇ ವೇಗದಲ್ಲಿ ಬೆಳೆಯುತ್ತಿದೆ .
- ಹೀಗೆ ಸಾಕಷ್ಟು ವಲಯಗಳನ್ನ ವಿವರಿಸುತ್ತಾ ಹೋಗಬಹುದು . ಇವೆಲ್ಲದರ ಅರ್ಥ ಇಷ್ಟೇ ಒಂದು ದೇಶ ಜನಾಂಗ ಏನ್ನನ್ನಾದರೂ ಸಾಧಿಸಬೇಕು ಎಂದರೆ ಖಂಡಿತ ಅದನ್ನ ಸಾಧಿಸಬಹದು ಎನ್ನುವುದಕ್ಕೆ ಉದಾಹರಣೆಯಾಗಿ ಬೋಟ್ಸ್ವಾನ ನಿಂತಿದೆ . ಆರ್ಥಿಕ ತಜ್ಞರ ಪಾಲಿಗೆ ಈ ದೇಶ ಕೇಸ್ ಸ್ಟಡಿ ಎಂದರೆ ಅದು ಅತಿಶಯೋಕ್ತಿ ಅಲ್ಲವೇ ಅಲ್ಲ .
- ತೆರಿಗೆಯಲ್ಲಿ ವಿನಾಯ್ತಿ , ಪಾರದರ್ಶಕತೆ ಇದ್ದರಷ್ಟೇ ಸಾಲದು ಜೊತೆಗೆ ಉತ್ತಮ ರಾಜಕೀಯ ಸ್ಥಿರತೆ ಅತ್ಯಂತ ಅವಶ್ಯಕ . ಬೋಟ್ಸ್ವಾನ ಈ ಅಂಶದಲ್ಲಿ ಹೆಚ್ಚು ಅದೃಷ್ಟವಂತ ದೇಶ ಎನ್ನಬಹದು . ಸ್ವತಂತ್ರ ಬಂದ ಹೊಸದರಲ್ಲಿ ಇದ್ದ ಪರಿಸ್ಥಿತಿಯಿಂದ ಹೊರಬಂದ ಈ ದೇಶ ಜಗತ್ತಿಗೆ , ಜಗತ್ತಿನ ಆರ್ಥಿಕ ತಜ್ಞರ ಹುಬ್ಬೇರುವಂತೆ ಬೆಳೆದಿದೆ , ಬೆಳೆಯುತ್ತಿದೆ .
- 2008 ರಿಂದ ಈಚೆಗೆ ಶುರುವಾದ ಆರ್ಥಿಕ ತಲ್ಲಣ ವಿಶ್ವವನ್ನೆ ನಡುಗಿಸಿದ್ದು ಮತ್ತು ಅಮೇರಿಕಾ , ಯೂರೋಪಿನ ಹಲವು ದೇಶಗಳು ಇನ್ನೂ ಅದರ ಹೊಡೆತದಿಂದ ಹೊರಬರಲು ಹೆಣಗುತ್ತಿರುವಾಗ ಬೋಟ್ಸ್ವಾನ ಈ ಹೊಡೆತದಿಂದ ಹೊರಬಂದಿದೆ . ಇದರ ಆರ್ಥಿಕತೆ ನಿಧಾನವಾಗಿ ಮತ್ತೆ ಏರುಗತಿಯತ್ತ ಸಾಗಿದೆ . 16 ಬಿಲಿಯನ್ ಜಿಡಿಪಿ ಹೊಂದಿ 2016 ರ ಆಫ್ರಿಕಾ ದಲ್ಲಿ ವ್ಯಾಪಾರ ಮಾಡಲು ಎರಡನೇ ಅತಿ ಉತ್ತಮ ದೇಶ ಎನ್ನುವ ಹೆಗ್ಗಳಿಕೆಯನ್ನ ತನ್ನದಾಗಿಸಿಕೊಂಡಿದೆ . ದಕ್ಷಿಣ ಆಫ್ರಿಕಾ ಮೊದಲನೇ ಸ್ಥಾನದಲ್ಲಿ ಅಭಾದಿತವಾಗಿದೆ .
- ಆಫ್ರಿಕಾ ಎಂದ ತಕ್ಷಣ ಹೊಟ್ಟೆ ಬೆನ್ನಿಗೆ ಅಂಟಿಕೊಂಡಿರುವ ಮಗುವಿನ ಚಿತ್ರಣ ಕಟ್ಟಿಕೊಡುವ NGO ಗಳ ಕಣ್ಣಿಗೆ ಪ್ರವರ್ಧಮಾನಕ್ಕೆ ಬರುತ್ತಿರುವ ಆಫ್ರಿಕಾ ಕಣ್ಣಿಗೇಕೆ ಬೀಳುವುದಿಲ್ಲ ಎನ್ನುವುದು ಪ್ರಶ್ನೆ .ಹಾಗೆಂದ ಮಾತ್ರಕ್ಕೆ ಎಲ್ಲವೂ ಅತ್ಯಂತ ಸುಂದರ , ಸ್ಥಿರ ಅಂತಲ್ಲ , ಇಂದಿಗೂ ಆಫ್ರಿಕಾ ದೇಶಗಳು ಹಲವು ಜ್ವಲಂತ ಸಮಸ್ಯೆಗಳನ್ನ ಎದಿರಿಸುತ್ತಿದೆ . ಸಮಸ್ಯೆ ಪೂರ್ಣ ಮುಗಿದುಹೋಗುವ ವಿಷಯವೇ ಅಲ್ಲ . ಆರ್ಥಿಕವಾಗಿ ನಿಸ್ತೇಜವಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಲೆಕ್ಕಕಿಲ್ಲದ ದೇಶಗಳು ಇಂದು ತಮ್ಮ ಇರುವಿಕೆಯನ್ನ ಸಾರುತ್ತಿರುವ ರೀತಿಯೆ ಒಂದು ಖುಷಿ , ಹೊಸ ಚೈತನ್ಯ ನೀಡುತ್ತದೆ .
ಜಾಂಬಿಯಾ ಎನ್ನುವ ಇನ್ನೊಂದು ಆಫ್ರಿಕನ್ ದೇಶದ ಬದಲಾವಣೆಯ ಕಥೆಯನ್ನ ಮುಂದಿನವಾರ ನೋಡೋಣ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos