ಗುವಾಹಟಿ: ಜಿಎಸ್ ಟಿ ಮಂಡಳಿಯ 23 ನೇ ಸಭೆ ಗುವಾಹಟಿಯಲ್ಲಿ ನಡೆದಿದ್ದು, 177 ವಸ್ತುಗಳಿಗೆ ವಿಧಿಸಲಾಗಿದ್ದ ತೆರಿಗೆಯನ್ನು ಶೇ.18 ಕ್ಕೆ ಇಳಿಕೆ ಮಾಡಿ, 50 ಸಾಮಗ್ರಿಗಳಿಗೆ ಮಾತ್ರ ಶೇ.28 ರಷ್ಟು ತೆರಿಗೆ ವ್ಯಾಪ್ತಿ ಮುಂದುವರೆಸಲು ನಿರ್ಧರಿಸಲಾಗಿದೆ.
ವಿತ್ತ ಸಚಿವ ಅರುಣ್ ಜೇಟ್ಲಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕ್ರೀಡಾ ಸಾಮಗ್ರಿಗಳೂ ಸೇರಿದಂತೆ ಒಟ್ಟು 177 ಸಾಮಗ್ರಿಗಳ ತೆರಿಗೆಯ ವ್ಯಾಪ್ತಿಯನ್ನು ಶೇ.28 ರಿಂದ ಶೇ.18 ಕ್ಕೆ ಇಳಿಕೆ ಮಾಡಲು ಜಿಎಸ್ ಟಿ ಕೌನ್ಸಿಲ್ ನಿರ್ಣಯ ಕೈಗೊಂಡಿದೆ. ಜಿಎಸ್ ಟಿ ಕೌನ್ಸಿಲ್ ನಿರ್ಣಯದಿಂದ ಗ್ರಾಹಕರಿಗೆ ಉಪಯೋಗವಾಗಲಿದ್ದು, ದಿನನಿತ್ಯ ಬಳಕೆ ಮಾಡುವ ವಸ್ತುಗಳು, ಪ್ಲಾಸ್ಟಿಕ್ ಸಾಮಗ್ರಿಗಳು, ಕರಕುಶಲ ಪೀಠೋಪಕರಣಗಳ ಬೆಲೆ ಇಳಿಕೆಯಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಐಷಾರಾಮಿ ಸರಕುಗಳು ಶೇ.28 ರಷ್ಟು ತೆರಿಗೆ ವ್ಯಾಪ್ತಿಯಲ್ಲಿ ಬರಲಿವೆ, ಡಿಯೋಡರೆಂಟ್, ವಾಷಿಂಗ್ ಪೌಡರ್, ಡಿಟರ್ಜೆಂಟ್, ಮಾರ್ಬಲ್ ಸೇರಿದಂತೆ ಹಲವು ವಸ್ತುಗಳು ಶೇ.18 ರಷ್ಟು ತೆರಿಗೆ ವ್ಯಾಪ್ತಿಯಲ್ಲಿ ಬರಲಿವೆ ಎಂದು ಸಭೆಯಲ್ಲಿ ಭಾಗಿಯಾಗಿದ್ದ ಬಿಹಾರ ಉಪಮುಖ್ಯಮಂತ್ರಿ ಸುಶೀಲ್ ಮೋದಿ ಹೇಳಿದ್ದಾರೆ.
ಕಾಂಗ್ರೆಸ್ ಆಡಳಿತ ರಾಜ್ಯಗಳಾದ ಕರ್ನಾಟಕ, ಪಂಜಾಬ್, ಕೇಂದ್ರಾಡಳಿತ ಪ್ರದೇಶವಾದ ಪಾಂಡಿಚೆರಿ ಜಿಎಸ್ ಟಿ ತೆರಿಗೆ ವ್ಯಾಪ್ತಿಗಳನ್ನು ಸಂಪೂರ್ಣವಾಗಿ ಕೂಲಂಕುಷ ಪರೀಕ್ಷೆಗೊಳಪಡಿಸಬೇಕೆಂಬ ಬೇಡಿಕೆ ಮುಂದಿಟ್ಟಿದ್ದವು. ಜಿಎಸ್ ಟಿ ಮಂಡಳಿ ಸಭೆಯ ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos