ವಾಣಿಜ್ಯ

ವಂಚನೆಗೆ ಅನಾಣ್ಯೀಕರಣವೆಂಬ ಪಾರದರ್ಶಕತೆ ಶ್ರೇಷ್ಠ ಸಾಧನವಾಗಿತ್ತು: ಅರುಣ್ ಜೇಟ್ಲಿ

Sumana Upadhyaya
ವಾಷಿಂಗ್ಟನ್: ಅಧಿಕ ಮೌಲ್ಯದ ನೋಟುಗಳ ಅನಾಣ್ಯೀಕರಣದ ಬಗ್ಗೆ ರಹಸ್ಯವನ್ನು ಕಾಪಾಡಿದ್ದ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ, ವಂಚನೆಗೆ ಅನಾಣ್ಯೀಕರಣವೆಂಬ ಪಾರದರ್ಶಕತೆ ಶ್ರೇಷ್ಠ ಹತ್ತಿಕ್ಕುವ ಸಾಧನವಾಗಿತ್ತು ಎಂದು ಹೇಳಿದ್ದಾರೆ.
ಅಂತರಾಷ್ಟ್ರೀಯ ಹಣಕಾಸು ನಿಧಿ ಮತ್ತು ವಿಶ್ವಬ್ಯಾಂಕಿನ ವಾರ್ಷಿಕ ಸಭೆಯಲ್ಲಿ ಭಾಗವಹಿಸಲು ವಾರಗಳ ಅಮೆರಿಕಾ ಪ್ರವಾಸದಲ್ಲಿರುವ ಅರುಣ್ ಜೇಟ್ಲಿ, ನೋಟುಗಳ ಅಮಾನ್ಯತೆ ವಿಷಯವನ್ನು ರಹಸ್ಯವಾಗಿಡದೆ ಮೊದಲೇ ತಿಳಿಸಿದ್ದರೆ ಜನರು ಚಿನ್ನ, ವಜ್ರ, ಭೂಮಿ ಖರೀದಿಸಿ ತಮ್ಮಲ್ಲಿರುವ ಕಪ್ಪು ಹಣವನ್ನು ಬಿಳಿ ಮಾಡಿಕೊಳ್ಳುತ್ತಿದ್ದರು. ಇದಕ್ಕಾಗಿ ಪಾರದರ್ಶಕತೆ ಕಾಪಾಡುವ ಸಲುವಾಗಿ ವಂಚನೆಯನ್ನು ತಡೆಗಟ್ಟಲು ಈ ಕ್ರಮವನ್ನು ಸರ್ಕಾರ ಕೈಗೊಂಡಿತು ಎಂದರು.
ನೋಟುಗಳ ಅನಾಣ್ಯೀಕರಣ ಪ್ರಕ್ರಿಯೆಯಲ್ಲಿ ರಹಸ್ಯ ಕಾಪಾಡುವುದು ಮುಖ್ಯವಾಗಿತ್ತು. ಪ್ರಧಾನ ಮಂತ್ರಿ ಮತ್ತು ಆರ್ ಬಿಐನ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದ ನೋಟು ಅನಾಣ್ಯೀಕರಣ ವಿಚಾರದಲ್ಲಿ ರಹಸ್ಯವನ್ನು ಕಾಪಾಡಲಾಯಿತು ಎಂದು ಹೇಳಿದ್ದಾರೆ.
ನೋಟುಗಳ ಅಮಾನ್ಯತೆ ಪ್ರಕ್ರಿಯೆ ಯಶಸ್ವಿಯಾಗಿದೆ ಎಂದು ಹೇಳಿದ ಜೇಟ್ಲಿ, ನಂತರದ ತಕ್ಷಣದ ಪರಿಣಾಮದಲ್ಲಿ ಯಾವುದೇ ಸಾರ್ವಜನಿಕ ಅಶಾಂತಿ ಉಂಟಾಗಿರಲಿಲ್ಲ. ಆರಂಭದಲ್ಲಿ ಸಾರ್ವಜನಿಕರಿಗೆ ಸ್ವಲ್ಪ ಮಟ್ಟಿಗೆ ಅನಾನುಕೂಲತೆಯುಂಟಾಗಿದ್ದರೂ ಕೂಡ ಸರ್ಕಾರದ ನಿರ್ಧಾರವನ್ನು ಯಾರೂ ದೂಷಿಸಲಿಲ್ಲ, ಬದಲಾಗಿ ಬೆಂಬಲಿಸಿದರು ಎಂದು ಹೇಳಿದರು.
ನೋಟುಗಳ ಅನಾಣ್ಯೀಕರಣದಿಂದಾಗಿ ಡಿಜಿಟಲ್ ವಹಿವಾಟು ಅಧಿಕವಾಗಿದೆ. ಬಹುಪಾಲು ಜನರು ತೆರಿಗೆ ಜಾಲ ವ್ಯಾಪ್ತಿಗೆ ಒಳಪಟ್ಟಿದ್ದಾರೆ ಎಂದರು.
ಕೇಂದ್ರ ಸರ್ಕಾರದ ನೋಟುಗಳ ಅನಾಣ್ಯೀಕರಣ, ಸರಕು ಮತ್ತು ಸೇವಾ ತೆರಿಗೆ ಜಾರಿಯಂತಹ ಕ್ರಮಗಳು ಭಾರತದ ಆರ್ಥಿಕತೆಯನ್ನು ಹೆಚ್ಚು ಬಲಿಷ್ಠ ದಾರಿಗೆ ತಂದಿವೆ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರದ ಈ ಆರ್ಥಿಕ ನಿರ್ಧಾರಗಳು ಸಾಂಸ್ಥಿಕ ಸುಧಾರಣೆಗಳು ಮತ್ತು ರಚನಾತ್ಮಕ ಬದಲಾವಣೆಗಳು. ಈ ರಚನಾತ್ಮಕ ಬದಲಾವಣೆಗಳು ಭಾರತದ ಆರ್ಥಿಕತೆಯನ್ನು ಬಲಿಷ್ಠ ಹಾದಿಯತ್ತ ಕೊಂಡೊಯ್ಯುತ್ತಿದೆ. ಇದರಿಂದ ಮುಂಬರುವ ದಿನಗಳಲ್ಲಿ ಭಾರತದ ಆರ್ಥಿಕತೆ ಇನ್ನಷ್ಟು ಬಲಿಷ್ಟವಾಗುವುದನ್ನು ನೋಡಬಹುದು ಎಂದು ನ್ಯೂಯಾರ್ಕಿನ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಹೇಳಿದರು.
SCROLL FOR NEXT