ವಾಣಿಜ್ಯ

'ಆರ್ ಬಿಐ' ಆರ್ಥಿಕ ಅಭಿವೃದ್ಧಿ ವಿರೋಧಿ: ಎಫ್ಐಸಿಸಿಐ ಅಧ್ಯಕ್ಷ ಪಂಕಜ್ ಪಟೇಲ್ ವಾಗ್ದಾಳಿ

Srinivasamurthy VN
ವಾಷಿಂಗ್ಟನ್: ಭಾರತೀಯ ರಿಸರ್ವ್ ಬ್ಯಾಂಕ್ ಭಾರತ ದೇಶದ ಆರ್ಥಿಕ ಅಭಿವೃದ್ಧಿಗೆ ವಿರೋಧಿಯಾಗಿದೆ ಎಂದು ಫೆಡರೇಶನ್ ಆಫ್ ಇಂಡಿಯನ್ ಚೇಂಬರ್ ಆಫ್ ಕಾಮರ್ಸ್ & ಇಂಡಸ್ಟ್ರಿ ಸಂಸ್ಥೆಯ ಅಧ್ಯಕ್ಷ ಪಂಕಜ್ ಪಟೇಲ್ ಕಿಡಿಕಾರಿದ್ದಾರೆ.
ಅಮೆರಿಕದ ವಾಷಿಂಗ್ಟನ್ ನಲ್ಲಿ ಮಾತನಾಡಿದ ಎಫ್ ಐಸಿಸಿಐ ಅಧ್ಯಕ್ಷ ಪಂಕಜ್ ಪಟೇಲ್ ಅವರು, ಆರ್ ಬಿಐ ನ ಇತ್ತೀಚೆಗಿನ ನಿರ್ಧಾರಗಳು ಅಚ್ಚರಿ ಮೂಡಿಸುತ್ತಿದೆ. ಆರ್ ಬಿಐ ದೇಶದ ಆರ್ಥಿಕತೆಗೆ ಪೂರಕವೋ ಅಥವಾ ಮಾರಕವೋ  ತಿಳಿಯುತ್ತಿಲ್ಲ. ದೇಶದಲ್ಲಿ ಬಡ್ಡಿದರ ಶೇ.6ರಷ್ಟಿದ್ದು, ಆರ್ಥಿಕ ಬೆಳವಣಿಗೆ, ಹಣದುಬ್ಬರ ಮತ್ತು ಬಡ್ಡಿದರಗಳ ನಡುವೆ ಸಮತೋಲನ ಇರಬೇಕು. ಆಗಷ್ಟೇ ದೇಶದ ಆರ್ಥಿಕತೆ ಚೇತರಿಸಿಕೊಳ್ಳಲು ಸಾಧ್ಯ. ಆದರೆ ಆರ್ ಬಿಐ ನ ಇತ್ತೀಚೆಗಿನ  ಆರ್ಥಿಕ ನೀತಿಗಳು ಉದ್ಯಮ ಸ್ನೇಹಿಯಾಗಿಲ್ಲ. ಇದು ದೇಶದ ಆರ್ಥಿಕತೆಗೆ ಖಂಡಿತಾ ಮಾರಕ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕಳೆದ ಅಕ್ಟೋಬರ್ 4ರಂದು ಆರ್ ಬಿಐ ಪ್ರಕಟಿಸಿದ್ದ ಆರ್ಥಿಕ ನೀತಿಯಲ್ಲಿ ಶೇ. 6ರಷ್ಟು ಬಡ್ಡಿದರವನ್ನು ಮುಂದುವರೆಸಲಾಗಿದೆ. ಆರ್ಥಿಕ ಬೆಳವಣಿಗೆ ಮುನ್ಸೂಚನೆ ಶೇ.6.7ರಷ್ಟು ಇದ್ದಾಗ್ಯೂ ಬಡ್ಡಿದರದಲ್ಲಿ ಬದಲಾವಣೆ ಮಾಡದೇ  ಇರುವುದು ಅಚ್ಚರಿ ತಂದಿದೆ. ಆರ್ ಬಿಐನ ಈ ನೀತಿ ನಿಜಕ್ಕೂ ಅಭಿವೃದ್ಧಿ ವಿರೋಧಿ ನೀತಿಯಾಗಿದೆ. ಆರ್ ಬಿಐ ಕೂಡಲೇ ಬಡ್ಡಿದರಗಳನ್ನು ಇಳಿಕೆ ಮಾಡಬೇಕು ಇಲ್ಲವಾದಲ್ಲಿ ಇದು ಉದ್ಯಮವಲಯಕ್ಕೆ ಮಾರಕವಾಗುವ ಸಾಧ್ಯತೆ ಇದೆ.  ಹಣದುಬ್ಬರವಿಲ್ಲದೇ ಆರ್ಥಿಕ ಅಭಿವೃದ್ಧಿ ಅಥವಾ ಆರ್ಥಿಕ ಬೆಳವಣಿಗೆ ಅಸಾಧ್ಯ ಎಂಬ ವಿಚಾರವನ್ನು ಆರ್ ಬಿಐ ಮನದಟ್ಟು ಮಾಡಿಕೊಳ್ಳಬೇಕು. ಬಿಗಿಯಾದ ಹಣಕಾಸು ನೀತಿ ದೇಶಕ್ಕೆ ಮಾರಕ. ಭಾರತದ ಆರ್ಥಿಕತೆಗೆ ಖಂಡಿತಾ  ಧಕ್ಕೆಯನ್ನುಂಟು ಮಾಡುತ್ತದೆ ಎಂದು ಪಂಕಜ್ ಪಟೇಲ್ ಅಭಿಪ್ರಾಯಪಟ್ಟಿದ್ದಾರೆ.
SCROLL FOR NEXT