ವಾಣಿಜ್ಯ

200 ರೂ. ನೋಟು ಸದ್ಯ ಎಟಿಎಂ ಗಳಲ್ಲಿ ಸಿಗಲ್ಲ

Raghavendra Adiga
ನವದೆಹಲಿ: ನೂತನ 200 ರೂ. ನೋಟು ಎಟಿಎಂ ನಲ್ಲಿ ಸಿಗಲು ಇನ್ನೂ 3 ತಿಂಗಳು ಕಾಯಬೇಕಾಗುತ್ತದೆ. ಹೊಸ ನೋಟು ಬರುವಂತೆ ಮಾಡಲು ಎಟಿಎಂ ಯಂತ್ರದ ಒಳಗಿನ ವ್ಯವಸ್ಥೆಯನ್ನು ಬದಲಿಸಬೇಕಿದೆ. ಸದ್ಯಕ್ಕೆ ಆಯ್ದ ಆರ್‌ಬಿಐ ಕಚೇರಿ ಮತ್ತು ಕೆಲವು ಬ್ಯಾಂಕ್‌ ಗಳಲ್ಲಿ ಮಾತ್ರ ಹೊಸ ನೋಟು ಲಭ್ಯವಿದೆ.
ಎಟಿಎಂ ಒಳ ವಿನ್ಯಾಸವನ್ನು ಬದಲಿಸುವ ಮೂಲಕ 200 ರೂ. ನೋಟು ಬರುವಂತೆ ಮಾದಬೇಕಾಗಿದ್ದು. ಈ ಬದಲಾವಣೆ ಮಾಡಲು ಕಾಲಾವಕಾಶ ಹಿಡಿಯಲಿದೆ. ಈಗಾಗಲೇ ಅನೇಕ ಬ್ಯಾಂಕ್‌ಗಳು ಎಟಿಎಂ ಸಂಸ್ಥೆಗಳನ್ನು ಎಟಿಎಂ ವಿನ್ಯಾಸ ಬದಲಾವಣೆಗೆ ಕೋರಿವೆ.
ಕಳೆದ ವರ್ಷವಷ್ಟೇ 2000 ರೂ. ಮುಖಬೆಲೆಯ ನೋಟು ಪೂರೈಕೆಗೆ ಪೂರಕವಾಗಿ ಎಟಿಎಂ ಯಂತ್ರದ ವಿನ್ಯಾಸವನ್ನು ಬದಲಿಸಲಾಗಿತ್ತು. ಇದೀಗ ಮತ್ತೊಂದು ಸುತ್ತಿನ ಬದಲಾವಣೆ ಮಾಡಬೇಕಾಗಿದೆ. ಇದಕ್ಕೆ ಯಾವುದೇ ಕಾಲಮಿತಿಯನ್ನು ಆರ್‌ಬಿಐ ನೀಡಿಲ್ಲ. ದೈನಂದಿನ ಎಟಿಎಂ ಚಟುವಟಿಕೆಗೆ ತೊಂದರೆಯಾಗದಂತೆ ಹೊಸ ನೋಟು ಪೂರೈಕೆಯ ವ್ಯವಸ್ಥೆ ಮಾಡಲು ಕನಿಷ್ಠ ಮೂರು ತಿಂಗಳಾದರೂ ಬೇಕು. ಈ ಸಂಬಂಧ ಆರ್‌ಬಿಐನಿಂದ ಯಾವುದೇ ನಿರ್ದೇಶನ ಬಂದಿಲ್ಲ ಎಂದು ಎಟಿಎಂ ತಯಾರಕ ಸಂಸ್ಥೆಗಳು ಹೇಳಿವೆ.
ಈ ನಡುವೆ, ತಮ್ಮ ಬ್ಯಾಂಕ್‌ನ ಶಾಖೆಗಳಿಗೆ ಹೊಸ 200 ರೂ. ನೋಟುಗಳು ಬಂದಿವೆ ಎಂದು ಮಂಗಳೂರಿನ ಕಾರ್ಪೊರೇಷನ್‌ ಬ್ಯಾಂಕ್‌ನ ಕೈವೈಸಿ-ಆ್ಯಂಟಿಮನಿ ಲಾಂಡರಿಂಗ್‌ ಸೆಲ್‌ ವ್ಯವಸ್ಥಾಪಕ ಏಕನಾಥ್‌ ಬಾಳಿಗ ಹೇಳಿದ್ದಾರೆ. ಇದೇ ರೀತಿ ಎಸ್‌ಬಿಐ ಮತ್ತು ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗಳಲ್ಲೂ ಹೊಸ ನೋಟು ಲಭ್ಯವಾಗಲಿದೆ.
SCROLL FOR NEXT