ವಾಣಿಜ್ಯ

ಭಾರತದ ಆರ್ಥಿಕ ಬೆಳವಣಿಗೆ ಕುಂಠಿತವಾಗಿರುವುದು ನಿಜ: ಎಸ್‏ಬಿಐ ಸಂಶೋಧನೆ

Sumana Upadhyaya
ಮುಂಬೈ:ಪ್ರಸಕ್ತ ಸಾಲಿನ ಹಣಕಾಸು ವರ್ಷದಲ್ಲಿ ದೇಶದ ಆರ್ಥಿಕತೆ ಕುಂಠಿತಗೊಂಡಿರುವುದು ವಾಸ್ತವ ಮತ್ತು ಅದು ತಾಂತ್ರಿಕವಾಗಿ ಅಲ್ಲ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸಂಶೋಧನೆ ದೃಢಪಡಿಸಿದೆ. 
ದೇಶದ ಆರ್ಥಿಕ ದೃಷ್ಟಿಕೋನದ ಇತ್ತೀಚಿನ ಮೌಲ್ಯಮಾಪನದಲ್ಲಿ ಈ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿನ ಆರ್ಥಿಕ ಹಿಂಜರಿತ ಕೇವಲ ಅಲ್ಪಾವಧಿಗೆ ಮಾತ್ರವಲ್ಲದೆ ದೀರ್ಘಾವಧಿಯವರೆಗೆ ಇದರ ಪರಿಣಾಮ ಬೀರಬಹುದು ಎಂದು ಸಂಶೋಧನೆ ಹೇಳಿದೆ.
2014ರ ಮೇ ತಿಂಗಳಲ್ಲಿ ಎನ್ ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮೊದಲ ಎರಡು ವರ್ಷಗಳಲ್ಲಿ ಭಾರತದ ಒಟ್ಟು ದೇಶೀಯ ಉತ್ಪನ್ನ(ಜಿಡಿಪಿ) ಶೇಕಡಾ 7ರಷ್ಟು ಬೆಳವಣಿಗೆಯಾಗಿತ್ತು. ಆದರೆ ಕಳೆದ ಆರು ತ್ರೈಮಾಸಿಕಗಳಲ್ಲಿ ಕುಂಠಿತವಾಗಿದೆ.
ಯುಪಿಎ ಸರ್ಕಾರದ ಅವಧಿಯಲ್ಲಿ ಹಣಕಾಸು ವರ್ಷ 14ರಲ್ಲಿ ನಮ್ಮ ದೇಶದ ಜಿಡಿಪಿ ಶೇಕಡಾ 4.7ರಷ್ಟಿತ್ತು. ಆ ನಂತರ ಉತ್ತಮ ಬೆಳವಣಿಗೆಯಾಗಿತ್ತು. ಆದರೆ ಕಳೆದ ವರ್ಷ ಬಂದ ಅಧಿಕ ಮೌಲ್ಯದ ನೋಟುಗಳ ಅಮಾನ್ಯತೆ ಹಾಗೂ ಸರಕು ಮತ್ತು ಸೇವಾ ತೆರಿಗೆಯಿಂದಾಗಿ ಆರ್ಥಿಕ ಬೆಳವಣಿಗೆ ಮತ್ತೆ ಕುಂಠಿತವಾಗಿದೆ.
ಇಂದು ರಫ್ತು, ಸರ್ಕಾರಿ ಹೂಡಿಕೆಗಳು, ಖಾಸಗಿ ಬಳಕೆ ಮತ್ತು ಖಾಸಗಿ ಹೂಡಿಕೆಗಳು ನಿರಾಶಾದಾಯಕವಾಗಿದ್ದು ನೋಟುಗಳ ಅಮಾನ್ಯತೆಯಿಂದ ಉಂಟಾದ ಹಾನಿಯನ್ನು ಸರಿಪಡಿಸಲಾಗದ ಪರಿಸ್ಥಿತಿಯುಂಟಾಗಿದೆ. ಆದರೂ ಭರವಸೆ ಕಳೆದುಕೊಳ್ಳಬೇಕಾಗಿಲ್ಲ. ಸಾರ್ವಜನಿಕ ಖರ್ಚುವೆಚ್ಚದ ಮೇಲೆ ಹಿಡಿತ ಆರ್ಥಿಕತೆ ವೃದ್ಧಿಗೆ ಉತ್ತೇಜನ ನೀಡಬಲ್ಲದು ಎಂದು ಆರ್ಥಿಕ ತಜ್ಞರು ಹೇಳುತ್ತಾರೆ.
ನಮ್ಮ ದೇಶದ ಆರ್ಥಿಕ ಪರಿಸ್ಥಿತಿ ಮತ್ತು ಅದರ ಉತ್ತೇಜನ ಕುರಿತು ಹಣಕಾಸು ಸಚಿವ ಅರುಣ್ ಜೇಟ್ಲಿ ನಿನ್ನೆ ಪರಾಮರ್ಶೆ ನಡೆಸಿದರು. ಸಭೆಯಲ್ಲಿ ವಾಣಿಜ್ಯ ಮತ್ತು ರೈಲ್ವೆ ಖಾತೆ ಸಚಿವರು ಭಾಗವಹಿಸಿದ್ದರು. ಪ್ರತಿ ಇಲಾಖೆಯಲ್ಲಿನ ಆದಾಯ ಹೆಚ್ಚಿಸುವ ಕ್ರಮಗಳ ಕುರಿತು ಚರ್ಚಿಸಲಾಯಿತು. ಆರ್ಥಿಕತೆಯನ್ನು ಪುನಶ್ಚೇತನಗೊಳಿಸುವ ಕ್ರಮಗಳ ಕುರಿತು ಅರುಣ್ ಜೇಟ್ಲಿಯವರು ಪ್ರಧಾನಿಗೆ ವಿವರ ಸಲ್ಲಿಸಲಿದ್ದಾರೆ. ಜೇಟ್ಲಿ ಹಾಗೂ ಇತರ ಅಧಿಕಾರಿಗಳೊಂದಿಗೆ ಪ್ರಧಾನಿಯವರ ಸಭೆ ನಿನ್ನೆ ಆಯೋಜಿಸಲಾಗಿತ್ತು. ಆದರೆ ಅದನ್ನು ಮುಂದೂಡಲಾಗಿದೆ. 
SCROLL FOR NEXT