ನವದೆಹಲಿ: ಬಜೆಟ್ ನಲ್ಲಿ ಸಮತೋಲನ ಕಾಯ್ದುಕೊಳ್ಳಲು ಹಣಕಾಸಿನ ಕೊರತೆಗಳನ್ನು ಕಡಿಮೆ ಮಾಡಿಕೊಳ್ಳುವ ಯುರೋಪ್ ಪ್ರಣೀತ ಆರ್ಥಿಕ ಸಂಪ್ರದಾಯವನ್ನು ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ತಳ್ಳಿಹಾಕಿದ್ದು, ಸರ್ಕಾರದ ಖರ್ಚುಗಳಿಗೆ ಹೊಸ ವ್ಯಾಖ್ಯಾನಗಳನ್ನು ಅಳವಡಿಸಿಕೊಳ್ಳುವಂತೆ ಕರೆ ನೀಡಿದ್ದಾರೆ.
ಇದೇ ವೇಳೆ ಮನೆ ಬಜೆಟ್ ಗೆ ರಾಷ್ಟ್ರದ ಬಜೆಟ್ ಗಳನ್ನು ಹೋಲಿಕೆ ಮಾಡುವುದು ತರ್ಕಬದ್ಧವಲ್ಲ ಎಂದೂ ರಾಜೀವ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ. ಸಿಐಐ ನ ವಾರ್ಷಿಕ ಸೆಷನ್ ನಲ್ಲಿ ಮಾತನಾಡಿರುವ ರಾಜೀವ್ ಕುಮಾರ್, ನೀತಿ ಆಯೋಗ ಸಾರ್ವಜನಿಕ ಖರ್ಚುಗಳನ್ನು ಮತ್ತಷ್ಟು ಪರಿಣಾಮಕಾರಿಗೊಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದ್ದಾರೆ.
ಖಾಸಗಿ ಹೂಡಿಕೆ ಕಡಿಮೆಯಾಗಿ, ಉದ್ಯೋಗ ಸೃಷ್ಟಿಯಾಗಬೇಕಿದ್ದರೆ ಸರ್ಕಾರ ಮಧ್ಯಪ್ರವೇಶ ಮಾಡುವುದು ಅನಿವಾರ್ಯ ಎಂದು ರಾಜೀವ್ ಕುಮಾರ್ ಹೇಳಿದ್ದಾರೆ.