ವಾಣಿಜ್ಯ

ಏಪ್ರಿಲ್ 15ರಿಂದ ಐದು ರಾಜ್ಯಗಳಲ್ಲಿ ಇ-ವೇ ಬಿಲ್ ಜಾರಿ

Lingaraj Badiger
ನವದೆಹಲಿ: ರಾಜ್ಯಗಳ ನಡುವೆ ಸರಕುಗಳ ಸಾಗಾಟ ಸುಗಮಗೊಳಿಸುವ, ಸರಕು ಮತ್ತು ಸೇವಾ ತೆರಿಗೆ(ಜಿಎಸ್ ಟಿ)ಯ ಭಾಗವಾಗಿರುವ ಇ-ವೇ ಬಿಲ್‌ ಪದ್ಧತಿಯನ್ನು ಏಪ್ರಿಲ್ 15ರಿಂದ ಐದು ರಾಜ್ಯಗಳಲ್ಲಿ ಜಾರಿ ತರಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಮಂಗಳವಾರ ತಿಳಿಸಿದೆ.
ಕೇಂದ್ರ ಹಣಕಾಸು ಸಚಿವಾಲಯ ಇಂದು ಬಿಡುಗಡೆ ಮಾಡಿರುವ ಪ್ರಕಟಣೆಯ ಪ್ರಕಾರ, ಇ-ವೇ ಬಿಲ್ ಪದ್ದತಿಯನ್ನು ಆಂಧ್ರ ಪ್ರದೇಶ, ಗುಜರಾತ್, ಕೇರಳ, ತೆಲಂಗಾಣ ಮತ್ತು ಉತ್ತರ ಪ್ರದೇಶದಲ್ಲಿ ಏಪ್ರಿಲ್ 15ರಿಂದ ಜಾರಿಗೆ ಬರುತ್ತಿದೆ. ನಂತರ ಹಂತ ಹಂತವಾಗಿ ದೇಶಾದ್ಯಂತ ಈ ವ್ಯವಸ್ಥೆ ಜಾರಿಗೆ ಬರಲಿದೆ. 
ಜಿಎಸ್‌ಟಿ ವ್ಯವಸ್ಥೆಯಲ್ಲಿ, ಸರಕುಗಳನ್ನು ರಾಜ್ಯದ ಒಳಗೆ ಮತ್ತು ರಾಜ್ಯದಿಂದ ರಾಜ್ಯಕ್ಕೆ ಸಾಗಿಸಲು ಇ–ವೇ ಬಿಲ್ ವ್ಯವಸ್ಥೆ ರೂಪಿಸಲಾಗಿದೆ. 50 ಸಾವಿರ ರುಪಾಯಿಗಿಂತ ಹೆಚ್ಚಿನ ಮೊತ್ತದ ಸರಕುಗಳನ್ನು 10 ಕಿ.ಮೀ ಆಚೆಗೆ ಸಾಗಿಸುವ ಮುಂಚೆಯೇ ಆನ್ ಲೈನ್‌ನಲ್ಲಿ ನೋಂದಣಿ ಮಾಡಿಸುವುದು ಕಡ್ಡಾಯವಾಗಿದೆ.
ಸರಕು ಸಾಗಿಸುವ ದೂರ ಆಧರಿಸಿ 1ರಿಂದ 20 ದಿನಗಳವರೆಗೆ ಬಿಲ್ ನ ಸಿಂಧುತ್ವ ಇರುತ್ತದೆ. ಜಿಎಸ್‌ಟಿಎನ್‌ ಈ ಬಿಲ್‌ ವಿತರಿಸಲಿದೆ.
ಸರಕುಗಳನ್ನು ಸಾಗಿಸುವವರು ತಮ್ಮ ಜತೆ ಸರಕುಪಟ್ಟಿ, ಪೂರೈಕೆ ಬಿಲ್‌ ಅಥವಾ ಇ–ವೇ ಬಿಲ್‌ ಹೊಂದಿರಬೇಕು. ತೆರಿಗೆ ಅಧಿಕಾರಿಗಳು ಮಾರ್ಗಮಧ್ಯೆ ತಪಾಸಣೆ ನಡೆಸುವ ಅಧಿಕಾರ ಹೊಂದಿರುತ್ತಾರೆ.
ಅಂತರ್‌ ರಾಜ್ಯ ಸರಕುಗಳ ಸಾಗಾಣಿಕೆ ಮೇಲೆ ನಿಗಾ ಇಡಲು ಇದು ನೆರವಾಗಲಿದೆ. ತೆರಿಗೆ ತಪ್ಪಿಸುವ ಪ್ರವೃತ್ತಿಗೂ ಕಡಿವಾಣ ಹಾಕಲು ಇದರಿಂದ ಸಾಧ್ಯವಾಗಲಿದೆ.
ಸೀಮಾ ಸುಂಕದಿಂದ ಅನುಮತಿ ಪಡೆಯಬೇಕಾದ ಸಂದರ್ಭದಲ್ಲಿ, ಬಂದರು, ವಿಮಾನ ನಿಲ್ದಾಣ, ವಿಮಾನ ಸರಕು ಸಾಗಣೆ ಕಾಂಪ್ಲೆಕ್ಸ್ ನಿಂದ ಸಾಗಿಸುವ ಸರಕುಗಳಿಗೆ ಇ–ವೇ ಬಿಲ್‌ ಅನ್ವಯವಾಗುವುದಿಲ್ಲ
SCROLL FOR NEXT