ಮುಂಬೈ: ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ 1.77 ಬಿಲಿಯನ್ ಡಾಲರ್ ಮೊತ್ತದ ಭಾರತದ ಅತಿ ದೊಡ್ಡ ಬ್ಯಾಂಕ್ ವಂಚನೆ ನಡೆದಿರುವುದು ದೇಶದ ಆರ್ಥಿಕ ಕ್ಷೇತ್ರವನ್ನೇ ಬೆಚ್ಚಿ ಬೀಳಿಸಿದೆ.
ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳು ಉದ್ಯಮಿಗಳಿಗೆ ನೀಡಿದ್ದ ಸಾಲ ವಾಪಸ್ ಪಡೆಯಲು ಹೆಣಗುತ್ತಿರುವಾಗಲೇ ಇಂಥಹದ್ದೊಂದು ಬೃಹತ್ ಹಗರಣ ಬಯಲಿಗೆ ಬಂದಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣ ಬಯಲಿಗೆ ಬಂದಿದ್ದು ಹೇಗೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಬಿಲಿಯನೇರ್, ವಜ್ರ, ಚಿನ್ನಾಭರಣ ವ್ಯಾಪಾರಿ ನಿರಾವ್ ಮೋದಿ, ಗೀತಾಂಜಲಿ ಜೆಮ್ಸ್ ನ ಎಂಡಿ ಮೆಹುಲ್ ಚೋಕ್ಸಿ ಸೇರಿದಂತೆ ನಾಲ್ಕು ಜನರು ಹಾಗೂ ಮೂರು ಕಂಪನಿಗಳು ಬ್ಯಾಂಕ್ ಗೆ ವಂಚಿಸಿದ್ದು 2.8 ಬಿಲಿಯನ್ ರೂಪಾಯಿಗಳನ್ನು ವಂಚನೆ ಮಾಡಿದ್ದಾರೆಂದು ಜ.29 ರಂದು ಮುಂಬೈ ನ ಪಂಜಾಬ್ ನ್ಯಾಷನಲ್ ಬ್ಯಾಂಕ್ ಅಧಿಕಾರಿಗಳು ಸಿಬಿಐ ಗೆ ದೂರು ನೀಡಿದ್ದರು.
ವಂಚನೆ ಮಾಡುವುದರಲ್ಲಿ ಮುಂಬೈ ನ ಶಾಖೆಯ ಇಬ್ಬರು ಕಿರಿಯ ನೌಕರರೂ ಸಹ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದ ಬ್ಯಾಂಕ್ ಅಧಿಕಾರಿಗಳು, ಇಬ್ಬರು ಕಿರಿಯ ನೌಕರರು ವಂಚನೆ ಮಾಡಿರುವ ಸಂಸ್ಥೆಗಳಿಗೆ ಕ್ರೆಡಿಟ್ ಲಿಮಿಟ್ ಇಲ್ಲದೇ ಲೆಟರ್ಸ್ ಆಫ್ ಅಂಡರ್ಟೇಕಿಂಗ್ ಕೊಟ್ಟಿದ್ದು ವಿದೇಶದಲ್ಲಿರುವ ಭಾರತದ ಇತರೆ ಬ್ಯಾಂಕ್ ಗಳಿಂದ ಮುಂಗಡವಾಗಿ ಅಲ್ಪಾವಧಿ ಸಾಲ (ಬೈಯರ್ ಕ್ರೆಡಿಟ್) ಪಡೆಯುವುದಕ್ಕೆ ಎಲ್ಒಯುಗಳನ್ನು ಬಳಕೆ ಮಾಡಲಾಗುತ್ತದೆ. ದೂರಿನ ಅನ್ವಯ ಸಿಬಿಐ ಜ.31 ರಂದು ಸಂಸ್ಥೆಗಳು ಹಾಗೂ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿತ್ತು.
ಪಿಎನ್ ಬಿ ಪ್ರಕಾರ ಜ.16 ರಂದು ಎಲ್ಲಾ ಆರೋಪಿತ ಸಂಸ್ಥೆಗಳು ಆಮದಿಗೆ ಸಂಬಂಧಿಸಿದ ಒಂದಷ್ಟು ದಾಖಲೆಗಳನ್ನು ಬ್ಯಾಂಕ್ ಗೆ ನೀಡಿ, ವಿದೇಶದಲ್ಲಿರುವ ಪೂರೈಕೆದಾರರಿಗೆ ಮುಂಬೈ ಶಾಖೆಯಿಂದ ಬೈಯರ್ ಕ್ರೆಡಿಟ್ ಪಾವತಿ ಮಾಡುವಂತೆ ಮನವಿ ಸಲ್ಲಿಸಿದ್ದವು, ಮನವಿ ಸಲ್ಲಿಸಿದ್ದ ಸಂಸ್ಥೆಗಳಿಗೆ ಮುಂಗಡವಾಗಿ ನೀಡಬಹುದಾದ ಕ್ರೆಡಿಟ್ ಮಿತಿ ಇರಲಿಲ್ಲವಾದ್ದರಿಂದ ಎಲ್ಒಯು ಮಂಜೂರು ಮಾಡುವುದಕ್ಕಾಗಿ ಸಂಪೂರ್ಣ ಮೊತ್ತವನ್ನು ಕೊಲಾಟರಲ್ ಆಗಿ ನಮೂದು ಮಾಡುವಂತೆ ಸೂಚನೆ ನೀಡಿತ್ತು. ಆದರೆ ಸಂಸ್ಥೆ ಇದ್ಯಾವುದೇ ಪ್ರಕ್ರಿಯೆಗಳನ್ನೂ ಪೂರ್ಣಗೊಳಿಸದೆಯೇ ಎಲ್ಒಯು ಪಡೆದಿರುವುದಾಗಿ ಹೇಳಿದೆ. ಈ ಬಗ್ಗೆ ಪಿಎನ್ ಬಿ ಪರಿಶೀಲನೆ ನಡೆಸಿದಾಗ ಸಂಸ್ಥೆಗಳು ಹೇಳಿದ್ದ ರೀತಿಯಲ್ಲಿ ಯಾವುದೇ ವಹಿವಾಟು ನಡೆದಿರುವುದು ಕಂಡುಬಂದಿಲ್ಲ. ಈ ರೀತಿಯಾಗಿ ಹಲವು ವರ್ಷಗಳು ಸಂಸ್ಥೆಯ ಅನುಕೂಲಕ್ಕೆ ತಕ್ಕಂತೆ ವಹಿವಾಟು ನಡೆಸಲು ಬ್ಯಾಂಕ್ ಒಳಗಿನವರೇ ಅನುವು ಮಾಡಿಕೊಟ್ಟಿರುವುದು ಬೆಳಕಿಗೆ ಬಂದಿದೆ. ವಿದೇಶದಲ್ಲಿರುವ ಭಾರತೀಯ ಬ್ಯಾಂಕ್ ಗಳ ಶಾಖೆಗಳೂ ಸಹ ಅಲ್ಪಾವಧಿ ಸಾಲ ನೀಡುತ್ತಿರುವುದರ ಬಗ್ಗೆ ಪಿಎನ್ ಬಿ ಯೊಂದಿಗೆ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ ಎಂದು ಹೇಳಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics