ವಾಣಿಜ್ಯ

ಪೆಟ್ರೋಲ್, ಡೀಸೆಲ್ ಬೆಲೆ 3 ವರ್ಷಗಳಲ್ಲೇ ಅತಿ ಹೆಚ್ಚು, ಅಬಕಾರಿ ಸುಂಕ ಕಡಿತಕ್ಕೆ ಇಂಧನ ಸಚಿವಾಲಯ ಮನವಿ

Lingaraj Badiger
ಮುಂಬೈ: ಕಳೆದ ಹಲವು ದಿನಗಳಿಂದ ತೈಲ ಬೆಲೆ ಏರುಮುಖವಾಗಿ ಸಾಗುತ್ತಿದ್ದು, ಮಂಗಳವಾರ ಕಳೆದ ಮೂರು ವರ್ಷಗಳಲ್ಲೇ ಅತಿ ಗರಿಷ್ಠ ಮಟ್ಟಕ್ಕೆ ತಲುಪಿದೆ.
2014ರಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಇದೇ ಮೊದಲ ಬಾರಿಗೆ ಪೆಟ್ರೋಲ್ ಬೆಲೆ ದೆಹಲಿಯಲ್ಲಿ ಪ್ರತಿ ಲೀಟರ್ ಗೆ 72,38 ರುಪಾಯಿ ಹಾಗೂ ಡೀಸೆಲ್ ಬೆಲೆ 63.20 ರುಪಾಯಿಗೆ ಏರಿಕೆಯಾಗುವ ಮೂಲಕ ಹೊಸ ದಾಖಲೆ ಸೃಷ್ಟಿಸಿದೆ.
ಬೆಂಗಳೂರಿನಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ ಬೆಲೆ 73.19 ರುಪಾಯಿ ಮತ್ತು ಡೀಸೆಲ್‌ ಬೆಲೆ 63.89 ರುಪಾಯಿಗೆ ತಲುಪಿದೆ. ದೇಶದ ವಾಣಿಜ್ಯ ನಗರಿ ಮುಂಬೈನಲ್ಲಿ ಪೆಟ್ರೋಲ್‌ ಬೆಲೆ 80ರುಪಾಯಿ ಹತ್ತಿರ ತಲುಪಿದ್ದರೆ, ಡೀಸೆಲ್‌ ಬೆಲೆ 65ಕ್ಕೆ ಏರಿದೆ. ಪ್ರತಿದಿನ ಪೈಸೆಗಳ ಲೆಕ್ಕದಲ್ಲಿ ಹೆಚ್ಚಳಗೊಳ್ಳುತ್ತಿರುವ ಇವೆರಡೂ ಇಂಧನ ಬೆಲೆಗಳು ಈ ಮಟ್ಟ ತಲುಪಿರುವುದು ಬಳಕೆದಾರರ ಪಾಲಿಗೆ ಆಘಾತಕಾರಿಯಾಗಿದೆ ಮತ್ತು ಕಳವಳಕ್ಕೆ ಎಡೆಮಾಡಿಕೊಟ್ಟಿದೆ.
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಗಗನಕ್ಕೆರುತ್ತಿದ್ದು, ಬಳಕೆದಾರರ ಮೇಲಿನ ಹೊರೆ ತಗ್ಗಿಸುವುದಕ್ಕಾಗಿ ಇಂಧನ ಸಚಿವಾಲಯ ಮುಂದಿನ ತಿಂಗಳು ಮಂಡನೆಯಾಗಲಿರುವ 2018-19ನೇ ಸಾಲಿನ ಕೇಂದ್ರ ಬಜೆಟ್ ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕ ಕಡಿತಗೊಳಿಸುವಂತೆ ಹಣಕಾಸು ಇಲಾಖೆಗೆ ಮನವಿ ಮಾಡಿದೆ.
ಅಬಕಾರಿ ಸುಂಕ ಕಡಿತಗೊಳಿಸುವಂತೆ ಉದ್ಯಮದಿಂದ ವ್ಯಾಪಕ ಬೇಡಿಕೆ ಇರುವ ಹಿನ್ನೆಲೆಯಲ್ಲಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರಿಗೆ ಶಿಫಾರಸು ಮಾಡಿರವುದಾಗಿ ಇಂಧನ ಕಾರ್ಯದರ್ಶಿ ಕೆ ಡಿ ತ್ರಿಪಾಠಿ ಅವರು ನಿನ್ನೆ ತಿಳಿಸಿದ್ದಾರೆ. ಆದರೆ ಈ ಕುರಿತು ಹೆಚ್ಚಿನ ಮಾಹಿತಿ ನೀಡಲು ಅವರು ನಿರಾಕರಿಸಿದ್ದಾರೆ.
SCROLL FOR NEXT