ವಾಣಿಜ್ಯ

ಭಾರತದಲ್ಲಿನ ವಿಜಯ್ ಮಲ್ಯ ಆಸ್ತಿ ಹರಾಜಿನಿಂದ 963 ಕೋಟಿ ಬಂದಿದೆ: ಎಸ್ ಬಿಐ

Lingaraj Badiger
ನವದೆಹಲಿ: ವಿವಿಧ ರಾಷ್ಟ್ರೀಯ ಬ್ಯಾಂಕ್ ಗಳಿಂದ ಸಾವಿರಾರು ಕೋಟಿ ರುಪಾಯಿ ಸಾಲ ಪಡೆದು ಮರುಪಾವತಿಸದೆ ವಿದೇಶದಲ್ಲಿ ತಲೆ ಮರೆಸಿಕೊಂಡಿರುವ ಮದ್ಯದ ದೊರೆ ವಿಜಯ್ ಮಲ್ಯ ಅವರ ಭಾರತೀಯ ಆಸ್ತಿ ಹರಾಜು ಹಾಕುವ ಮೂಲಕ 963 ಕೋಟಿ ರುಪಾಯಿ ಮರು ಪಡೆಯಲಾಗಿದೆ ಎಂದು ಎಸ್ ಬಿಐ ವ್ಯವಸ್ಥಾಪಕ ನಿರ್ದೇಶಕ ಅರ್ಜಿತ್ ಬಸು ಅವರು ಶುಕ್ರವಾರ ಹೇಳಿದ್ದಾರೆ.
ಲಂಡನ್ ನಲ್ಲಿರುವ ವಿಜಯ್‌ ಮಲ್ಯ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಲು ಬ್ರಿಟನ್ ಕೋರ್ಟ್ ಭಾರತೀಯ ಬ್ಯಾಂಕ್ ಗಳಿಗೆ ಅನುಮತಿ ನೀಡಿರುವುದಕ್ಕೆ ನಮಗೆ ಸಂತೋಷವಾಗಿದೆ. ಲಂಡನ್ ಕೋರ್ಟ್ ನ ಈ ಆದೇಶದಿಂದಾಗಿ ಮಲ್ಯ ಅವರ ವಿದೇಶಿ ಆಸ್ತಿ ಜಪ್ತಿ ಮಾಡಲು ಸಹಕಾರಿಯಾಗಲಿದೆ ಎಂದಿದ್ದಾರೆ.
ಆಸ್ತಿ ಜಪ್ತಿ ಮಾಡುವ ಕುರಿತು ಯಾವುದೇ ನಿರ್ಧಿಷ್ಠ ಸಂಖ್ಯೆ ನೀಡಲು ನಿರಾಕರಿಸಿದ ಅವರು, ನಮ್ಮ ಹಣದ ಗಮನಾರ್ಹ ಭಾಗವನ್ನು ಪಡೆಯುವ ವಿಶ್ವಾಸವಿದೆ ಎಂದಿದ್ದಾರೆ.
ನಿನ್ನೆಯಷ್ಟೇ ಲಂಡನ್ ಹೈಕೋರ್ಟ್ ಎಸ್ ಬಿಐ ನೇತೃತ್ವದ 13 ಭಾರತೀಯ ಬ್ಯಾಂಕ್ ಗಳಿಗೆ ವಿದೇಶದಲ್ಲಿರುವ ವಿಜಯ್ ಮಲ್ಯ ಆಸ್ತಿ ಜಪ್ತಿ ಮಾಡಲು ಅನುಮತಿ ನೀಡಿದೆ. ಆದರೆ 
ಕೋರ್ಟ್‌ ಬ್ಯಾಂಕ್‌ಗಳಿಗೆ ಈಗಲೇ ಆಸ್ತಿಗಳನ್ನು ವಶಪಡಿಸಿಕೊಳ್ಳುವಂತೆ ಆದೇಶ ನೀಡಿಲ್ಲ. ಬದಲಾಗಿ ಮಲ್ಯ ಅವರು ಸಾಲ ಮರುಪಾವತಿ ಮಾಡದೇ ಹೋದಲ್ಲಿ ಮಾತ್ರ ಈ ಆಸ್ತಿಗಳನ್ನು ಬ್ಯಾಂಕ್ ಗಳು ಬಳಸಿಕೊಳ್ಳಬಹುದು ಎಂದಿದೆ.
ಲಂಡನ್‌ ಹೈಕೋರ್ಟ್‌ನ ಈ ಆದೇಶದಿಂದ ಭಾರತದ 13 ಬ್ಯಾಂಕ್‌ಗಳಿಗೆ ಮೇಲುಗೈ ಸಾಧಿಸಿದಂತಾಗಿದೆ. ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ, ಬ್ಯಾಂಕ್‌ ಆಫ್‌ ಬರೋಡ, ಕಾರ್ಪೋರೇಷನ್‌ ಬ್ಯಾಂಕ್‌, ಫೆಡರಲ್‌ ಬ್ಯಾಂಕ್‌, ಇಂಡಿಯನ್‌ ಓವರ್‌ಸೀಸ್‌ ಬ್ಯಾಂಕ್‌, ಜಮ್ಮು ಮತ್ತು ಕಾಶ್ಮೀರ್‌ ಬ್ಯಾಂಕ್‌, ಪಂಜಾಬ್‌ ಮತ್ತ ಸಿಂದ್‌ ಬ್ಯಾಂಕ್‌, ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌, ಯುನೈಟೆಡ್‌ ಬ್ಯಾಂಕ್‌ ಆಫ್‌ ಇಂಡಿಯಾ, ಜೆಎಂ ಫೈನಾಶ್ಶಿಯಲ್‌ ಅಸಿಸ್ಟ್‌ ರಿ ಕನ್‌ಸ್ಟ್ರಕ್ಷನ್‌ ಕಂ.ಪ್ರೈ.ಲಿ.ಗಳು ಇಂಗ್ಲೆಂಡ್‌ನಲ್ಲಿರುವ ಮಲ್ಯ ಆಸ್ತಿಯನ್ನು ಮುಟ್ಟುಗೋಲು ಹಾಕಲು ಅವಕಾಶ ಪಡೆದಿವೆ.
SCROLL FOR NEXT