2017-18 ನೇ ಸಾಲಿನ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಜುಲೈ.31 ಕೊನೆಯ ದಿನವಾಗಿದ್ದು, ತೆರಿಗೆ ರಿಟರ್ನ್ಸ್ ಸಲ್ಲಿಕೆ ನಿಯಮಗಳಲ್ಲಿ ಕೆಲವು ಪ್ರಮುಖ ಬದಲಾವಣೆಗಳನ್ನು ತರಲಾಗಿದೆ.
ಈ ಬಾರಿಯ ಬದಲಾವಣೆಯಲ್ಲಿ ಪರಿಚಯಿಸಲಾಗಿರುವ ಇ- ಮೌಲ್ಯಮಾಪನ (e-assessment) ತೆರಿಗೆ ರಿಟರ್ನ್ಸ್ ಸಲ್ಲಿಸುವವರಿಗೆ ಸಹಕಾರಿಯಾಗಲಿದ್ದು, ತೆರಿಗೆ ಪಾವತಿ ಮಾಡುವವರ ನಡುವೆ ಮೌಲ್ಯಪಾಮನ ಮಾಡುವ ಅಧಿಕಾರಿಗಳ ಹಸ್ತಕ್ಷೇಪ ಸಂಪೂರ್ಣವಾಗಿ ಇಲ್ಲದಂತಾಗಿದೆ. ಈ ಬದಲಾವಣೆಯಿಂದ ಹೆಚ್ಚು ಪಾರದರ್ಶಕತೆ ಕಾಯ್ದುಕೊಳ್ಳಲು ಸಾಧ್ಯ ಎನ್ನುತ್ತಾರೆ ಅಧಿಕಾರಿಗಳು.
ನಿಮ್ಮ ಆದಾಯಕ್ಕೆ ಅನುಗುಣವಾಗಿ ತೆರಿಗೆ ಪಾವತಿಸಬಹುದಾಗಿದೆಯೋ ಅಥವಾ ಇಲ್ಲವೋ ರಿಟರ್ನ್ಸ್ ಕುರಿತ ಮಾಹಿತಿಯನ್ನಂತೂ ಸಲ್ಲಿಸಲೇಬೇಕು. ಒಂದು ವೇಳೆ ಜು.31 ರ ನಂತರ ಸಲ್ಲಿಸಿದರೆ ಈ ವರ್ಷದಿಂದ 5,000 ಶುಲ್ಕ ವಿಧಿಸಲಾಗುತ್ತದೆ. 2018 ರ ಡಿಸೆಂಬರ್ 31 ರ ನಂತರ ಸಲ್ಲಿಸಿದರೆ 10,000 ರೂಪಾಯೊ ಶುಲ್ಕ ವಿಧಿಸಲಾಗುತ್ತದೆ ಎಂದು ಕ್ಲಿಯರ್ ಟ್ಯಾಕ್ಸ್ ನ ಸ್ಥಾಪಕ ಹಾಗೂ ಸಿಇಒ ಅರ್ಚಿತ್ ಗುಪ್ತಾ ಹೇಳಿದ್ದಾರೆ.
ಐಟಿ ರಿಟರ್ನ್ಸ್ ಸಲ್ಲಿಸುವುದಕ್ಕೂ ಮುನ್ನ ನೀವು ಗಮನದಲ್ಲಿಟ್ಟುಕೊಳ್ಳಲೇಬೇಕಾದ ಅಂಶಗಳು ಹೀಗಿವೆ
- ತೆರಿಗೆ ಲೆಕ್ಕ ಹಾಕುವುದಕ್ಕಾಗಿ ನೀವು ಒಳಪಡುವ ಆದಾಯದ ಸ್ಲ್ಯಾಬ್ ಕುರಿತು ಸರಿಯಾಗಿ ಅರ್ಥಮಾಡಿಕೊಂಡು, ಖಚಿತಪಡಿಸಿಕೊಳ್ಳಿ
- ಮೌಲ್ಯಮಾಪನದ ವೇಳೆ ಕೆಲಸವನ್ನು ಸರಳೀಕರಣಗೊಳಿಸಲು ಇ-ಫೈಲಿಂಗ್ ಆಯ್ಕೆಯನ್ನು ಉಪಯೋಗಿಸಿಕೊಳ್ಳಿ
- ಬ್ಯಾಂಕ್ ಖಾತೆ ವಿವರ, ಆಧಾರ್ ನೋಂದಣಿ ಐಡಿ, ಪ್ಯಾನ್, ಆಧಾರ್ ನಂತಹ ದಾಖಲೆಗಳು ಸಿದ್ಧವಾಗಿರಿಸಿಕೊಂಡಿರಿ
- ರಿಟರ್ನ್ಸ್ ನಲ್ಲಿ ಆದಾಯದ ಎಲ್ಲಾ ಮೂಲಗಳನ್ನೂ ದಾಖಲಿಸಿದ್ದೀರಾ ಎಂದು ಖಚಿತಪಡಿಸಿಕೊಳ್ಳಿ, ಈ ಪೈಕಿ ವಿನಾಯಿತಿ ಆದಾಯದ ಬಗ್ಗೆಯೂ ಮಾಹಿತಿ ನೀಡಿ
- ರಿಟರ್ನ್ಸ್ ಸಲ್ಲಿಕೆಗೂ ಮುನ್ನ ನೌಕರಿಯಲ್ಲಿರುವ ಸಂಸ್ಥೆಯಿಂದ ಫಾರ್ಮ್ 16 ನ್ನು ಪಡೆದುಕೊಳ್ಳಿ
- ಫಾರ್ಮ್ 16 ರಲ್ಲಿರುವುದರ ಜೊತೆಗೆ ಫಾರ್ಮ್ 26ಎಎಸ್ ನಲ್ಲಿರುವ ಆದಾಯ ಹಾಗೂ ಟಿಡಿಎಸ್ ವಿವರಗಳನ್ನು ಸಮನ್ವಯಗೊಳಿಸಿ
- ಹೂಡಿಕೆ ಸಂಬಂಧಿತ ದಾಖಲೆಗಳನ್ನು ಸಿದ್ಧವಾಗಿರಿಸಿಕೊಂಡಿರಿ
- ನಿಮ್ಮ ಎಲ್ಲಾ ಬ್ಯಾಂಕ್ ಖಾತೆಗಳ ವಿವರಗಳನ್ನೂ ಸಹ ರಿಟರ್ನ್ಸ್ ನಲ್ಲಿ ಸಲ್ಲಿಸಬೇಕು. ನಿಷ್ಕ್ರಿಯವಾಗಿರುವ ಬ್ಯಾಂಕ್ ಖಾತೆಗಳಿದ್ದರೆ ಅವುಗಳ ಬಗ್ಗೆ ವಿವರ ನೀಡುವ ಅಗತ್ಯವಿಲ್ಲ.
- ಒಮ್ಮೆ ರಿಟರ್ನ್ಸ್ ನ್ನು ಅಪ್ ಲೋಡ್ ಮಾಡಿದ ನಂತರ ಇ-ಪರಿಶೀಲನೆಗೊಳಪಡಿಸಿ, ಅಥವಾ ಸಹಿ ಮಾಡಲಾಗಿರುವ ಐಟಿಆರ್ ವಿ (ರಿಟರ್ನ್ ಸಲ್ಲಿಸಿರುವ ಸ್ವೀಕೃತಿ)ಯನ್ನು ಪಡೆದು ಸಿಪಿಸಿ, ಬೆಂಗಳೂರಿಗೆ 120 ದಿನಗಳೊಳಗಾಗಿ ಕಳಿಸಿ. ಒಂದು ವೇಳೆ ಅಪ್ ಲೋಡ್ ಮಾಡಿದ 120 ದಿನಗಳಲ್ಲಿ ಕಳಿಸದೇ ಇದ್ದಲ್ಲಿ ರಿಟರ್ನ್ಸ್ ಸಲ್ಲಿಸಿಲ್ಲ ಎಂದು ಪರಿಗಣಿಸಲಾಗುತ್ತದೆ.
- ಕೊನೆಯ ದಿನದವರೆಗೂ ಟೈಮ್ ಇದೆ ಅಲ್ವಾ ಅಂತ ಕಾಲ ಮುಂದೂಡಿದರೆ ರಿಟರ್ನ್ಸ್ ಸಲ್ಲಿಸುವಾಗ ತಪ್ಪುಗಳಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಬೇಗ ರಿಟರ್ನ್ಸ್ ಸಲ್ಲಿಸಿಕೆಗೆ ಸಿದ್ಧತೆ ಮಾಡಿಕೊಳ್ಳಿ
ರಿಟರ್ನ್ಸ್ ಸಲ್ಲಿಸಬೇಕಾದರೆ ಈ 10 ತಪ್ಪುಗಳ ಬಗ್ಗೆ ಎಚ್ಚರವಿರಲಿ
- ರಿಟರ್ನ್ಸ್ ಸಲ್ಲಿಸಬೇಕಾದರೆ ನಿಮ್ಮ ಸಿದ್ಧತೆಯನ್ನು ಸರಿಯಾಗಿ ಪರಿಶೀಲಿಸಿಕೊಳ್ಳಿ, ಈ ಹಂತದಲ್ಲಿ ಸ್ವಾಭಾವಿಕವಾಗಿ ಸಂಭವಿಸಬಹುದಾದ ತಪ್ಪುಗಳ ಬಗ್ಗೆ ಎಚ್ಚರವಿರಲಿ, ಎಚ್ಚರಿಕೆ ವಹಿಸಬೇಕಾದ ಅಂಶಗಳು ಇಲ್ಲಿವೆ
- ಸಾಮಾನ್ಯವಾಗಿ ನಡೆಯಬಹುದಾದ ತಪ್ಪೆಂದರೆ ಒಮ್ಮೆ ರಿಟರ್ನ್ಸ್ ಸಲ್ಲಿಕೆಯಾದ ನಂತರ ಅದನ್ನು ಪರಿಶೀಲನೆಗೊಳಪಡಿಸದೇ ಇರುವುದು
- ಆದಾಯಕ್ಕೆ ಸಂಬಂಧಪಟ್ಟಿದ್ದನ್ನು ಫಾರ್ಮ್ 26 ಎಎಸ್ ನಲ್ಲಿರುವ ಟಿಡಿಎಸ್ ಗೆ ಸೇರಿಸದೇ ಇರುವುದು, ಆದಾಯಕ್ಕೆ ಅನುಗುಣವಾದ ಟಿಡಿಎಸ್ ನ್ನು ಪಡೆದುಕೊಳ್ಳುವುದು
- ಉಳಿತಾಯ ಖಾತೆಯ ಮೂಲಕ ಬಡ್ಡಿಯಿಂದ ಬಂದ ಆದಾಯವನ್ನು ರಿಟರ್ನ್ಸ್ ನಲ್ಲಿ ಸೇರಿಸದೇ ಇರುವುದು
- ಅಪ್ರಾಪ್ತರು ಅಥವಾ ಪತ್ನಿಯ ಹೆಸರಿನಲ್ಲಿರುವ ಆದಾಯವನ್ನು ಸೇರಿಸದೇ ಇರುವುದು
- ಎಲ್ಲಾ ಬ್ಯಾಂಕ್ ಖಾತೆಗಳ ವಿವರ ನೀಡಲು ಮರೆಯುವುದು
- ಬ್ಯಾಂಕ್ ಹೊರತಾಗಿ ತೆರಿಗೆ ಪಾವತಿಗೆ ಯೋಗ್ಯವಾದ ಬಡ್ಡಿಯಿಂದ ಬರುವ ಆದಾಯವನ್ನು ಸೇರಿಸದೇ ಇರುವುದು
- ತೆರಿಗೆ ವಿಧಿಸಬಹುದಾದ ಎಲ್ ಐಸಿಯ ರಸೀದಿಗಳನ್ನು ನೀಡಲು ಮರೆಯುವುದು
- ಸೇವಾ ಉದ್ದೇಶಗಳಿಗೆ ಮಾಡಿದ ದೇಣಿಗೆಗೆ ತೆರಿಗೆ ವಿನಾಯ್ತಿ ಇರುತ್ತದೆ, ಆದರೆ ದೇಣಿಗೆ ಪಡೆದಿರುವ ವ್ಯಕ್ತಿಯ ಪ್ಯಾನ್ ನಂಬರ್ ದಾಖಲಿಸುವುದನ್ನು ಮರೆಯಬೇಡಿ
- ಪತ್ನಿಗೆ ಉಳಿತಾಯ ಖಾತೆಯ ಮೂಲಕ ಬಡ್ಡಿಯಿಂದ ಬಂದ ಆದಾಯಕ್ಕೆ ತೆರಿಗೆ ವಿನಾಯ್ತಿ ಇದೆ ಎಂದುಕೊಂಡು ರಿಟರ್ನ್ಸ್ ನಲ್ಲಿ ದಾಖಲಿಸದೇ ಇರುವುದೂ ಸಹ ನಿಮಗೆ ಮುಂದಿನ ದಿನಗಳಲ್ಲಿ ಸಂಕಷ್ಟ ತಂದೊಡ್ಡಬಹುದು. ಆದ್ದರಿಂದ ಐಟಿ ರಿಟರ್ನ್ಸ್ ಸಲ್ಲಿಸುವ ವೇಳೆ ಸಾಮಾನ್ಯವಾಗಿ ಸಂಭವಿಸುವ ಈ ಮೇಲಿನ 10 ತಪ್ಪುಗಳ ಬಗ್ಗೆ ಎಚ್ಚರವಿರಲಿ.