ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಾಣಿಜ್ಯ

'ಕಿಸಾನ್ ವಿಕಾಸ್ ಪತ್ರ' ಹೂಡಿಕೆಗೆ ಉತ್ತಮ ಯೋಜನೆ

ಭಾರತೀಯ ಅಂಚೆ ಇಲಾಖೆ ಸಮಾಜದ ವಿವಿಧ ವರ್ಗಗಳ ಜನರಿಗೆ ವಿವಿಧ ಉಳಿತಾಯ ...

ಸಾಂದರ್ಭಿಕ ಚಿತ್ರ
Sumana Upadhyaya
Updated On : 30 Jul 2018, 2:00 am

ಹೈದರಾಬಾದ್: ಭಾರತೀಯ ಅಂಚೆ ಇಲಾಖೆ ಸಮಾಜದ ವಿವಿಧ ವರ್ಗಗಳ ಜನರಿಗೆ ವಿವಿಧ ಉಳಿತಾಯ ಯೋಜನೆಗಳನ್ನು ನೀಡುತ್ತಿದ್ದು ಕಿಸಾನ್ ವಿಕಾಸ್ ಪತ್ರ ಅವುಗಳಲ್ಲಿ ಪ್ರಮುಖವಾದುದು.

ಕಿಸಾನ್ ವಿಕಾಸ್ ಪತ್ರ ಯೋಜನೆಯಡಿ ಶೇಕಡಾ 7.3ರಷ್ಟು ವಾರ್ಷಿಕ ಬಡ್ಡಿ ನೀಡಲಾಗುತ್ತದೆ. 9 ವರ್ಷ 10 ತಿಂಗಳು ಕಳೆದ ಮೇಲೆ ಹೂಡಿಕೆ ದ್ವಿಗುಣವಾಗುತ್ತದೆ. ದೀರ್ಘಕಾಲದಲ್ಲಿ ಸುರಕ್ಷತೆಯ ಹೂಡಿಕೆ ದೃಷ್ಟಿಯಿಂದ ಕಿಸಾನ್ ವಿಕಾಸ್ ಪತ್ರ ಉತ್ತಮ ಹೂಡಿಕೆ ಆಯ್ಕೆಯಾಗಿದೆ.

ಭಾರತದಾದ್ಯಂತ ಇರುವ ಎಲ್ಲಾ ಅಂಚೆ ಕಚೇರಿಗಳಲ್ಲಿ ಕಿಸಾನ್ ವಿಕಾಸ್ ಪತ್ರ ಸೌಲಭ್ಯವಿದೆ. ಕನಿಷ್ಠ ಸಾವಿರ ರೂಪಾಯಿ ಠೇವಣಿಯಿಡಬೇಕು. ಗರಿಷ್ಠ ಎಷ್ಟು ಹಣ ಬೇಕಾದರೂ ಇಡಬಹುದು. ಆದರೆ ಜನರಲ್ಲಿ ಕಿಸಾನ್ ವಿಕಾಸ್ ಪತ್ರ ಬಗ್ಗೆ ಇರುವ ಒಂದು ತಪ್ಪು ಗ್ರಹಿಕೆಯೆಂದರೆ ಕೇವಲ ರೈತ ಸಮುದಾಯದವರಿಗೆ ಮಾತ್ರ ಇರುವ ಹೂಡಿಕೆಯಿದು ಎಂಬುದು. ಅದು ತಪ್ಪು. ಯಾರು ಬೇಕಾದರೂ, ಯಾವ ಉದ್ಯೋಗದಲ್ಲಿರುವವರು ಬೇಕಾದರೂ ಇದರಲ್ಲಿ ಹೂಡಿಕೆ ಮಾಡಬಹುದು ಎನ್ನುತ್ತಾರೆ ಹೈದರಾಬಾದಿನ ಪ್ರಧಾನ ಅಂಚೆ ಕಚೇರಿಯ ವ್ಯವಸ್ಥಾಪಕ ಪಿವಿಎಸ್ ರೆಡ್ಡಿ.

18 ವರ್ಷ ಪೂರೈಸಿದವರು ಕಿಸಾನ್ ವಿಕಾಸ್ ಪ್ರಮಾಣಪತ್ರವನ್ನು ಮಾಡಿಸಿಕೊಳ್ಳಬಹುದು. 18 ವರ್ಷಕ್ಕಿಂತ ಕೆಳಗಿನವರ ಪರವಾಗಿಯೂ ಮಾಡಿಸಿಕೊಳ್ಳಬಹುದು ಅಥವಾ ಇಬ್ಬರು ವಯಸ್ಕರು ಜಂಟಿಯಾಗಿ ಮಾಡಿಸಬಹುದು. ಹೂಡಿಕೆ ಮಾಡಿದ ಮೊತ್ತ ಮೆಚ್ಯೂರಿಟಿಗೆ ಬರಲು 118 ತಿಂಗಳು ಬೇಕಾಗಿದ್ದು ಅಗತ್ಯಬಿದ್ದರೆ ಎರಡೂವರೆ ವರ್ಷಗಳಲ್ಲಿ ನಗದು ಪಡೆಯಬಹುದು.

ಅಂಚೆ ಕಚೇರಿಯ ಪ್ರಮುಖ ಹೂಡಿಕೆಗಳಲ್ಲಿ ಕಿಸಾನ್ ವಿಕಾಸ್ ಪತ್ರ ಕೂಡ ಒಂದು. ಅಂಚೆ ಕಚೇರಿಯ ಬೇರೆ ಉಳಿತಾಯ ಯೋಜನೆಗಳಿಗಿಂತ ಇದರಲ್ಲಿ ಬಡ್ಡಿಮೊತ್ತ ಕಡಿಮೆಯಾದರೂ ಕೂಡ ದೀರ್ಘಾವಧಿಯಲ್ಲಿ ಹಣ ಹೂಡಿಕೆ ಮಾಡಲು ಯೋಚಿಸುತ್ತಿರುವವರಿಗೆ ಇದು ಸುರಕ್ಷಿತವಾದ ಆಯ್ಕೆಯಾಗಿದೆ.

ಕಿಸಾನ್ ವಿಕಾಸ್ ಪತ್ರದಡಿಯಲ್ಲಿ ಹೂಡಿಕೆ ಮಾಡುವುದು, ವ್ಯವಹಾರ ನಡೆಸುವುದು ಮತ್ತು ಅಗತ್ಯಬಿದ್ದರೆ ಬೇರೆಡೆಗೆ ವರ್ಗಾಯಿಸುವುದು ಸುಲಭವಾಗಿದೆ. ಗ್ರಾಮೀಣ ಪ್ರದೇಶದವರಿಗೆ ಇನ್ನೂ ಅನುಕೂಲ. ಆದರೆ ಇದರಿಂದ ಯಾವುದೇ ತೆರಿಗೆ ವಿನಾಯ್ತಿ ಸಿಗುವುದಿಲ್ಲ ಎನ್ನುತ್ತಾರೆ ಹಣಕಾಸು ಸಲಹೆಗಾರ ಸುಬ್ಬರಾವ್.

ಭಾರತೀಯ ಅಂಚೆ ಕಚೇರಿಯಲ್ಲಿ ಸುಕನ್ಯ ಸಮೃದ್ಧಿ ಯೋಜನೆ, ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ, ಹಿರಿಯ ನಾಗರಿಕರ ಉಳಿತಾಯ ಯೋಜನೆ ಇತ್ಯಾದಿ ಜನಪ್ರಿಯವಾಗಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments