ವಾಣಿಜ್ಯ

ವ್ಯವಸ್ಥೆ ಶುದ್ಧೀಕರಣಕ್ಕೆ 'ನೀಲಕಂಠ'ನಂತೆ ವಿಷ ಕುಡಿಯಲೂ ಸಿದ್ಧ: ಆರ್ ಬಿಐ ಗವರ್ನರ್ ಉರ್ಜಿತ್ ಪಟೇಲ್

Manjula VN
ಗಾಂಧಿನಗರ: ಬಹುಕೋಟಿ ಬ್ಯಾಂಕ್ ಹಗರಣಗಳ ಕುರಿತಂತೆ ತೀವ್ರ ಬೇಸರ ವ್ಯಕ್ತಪಡಿಸಿರುವ ಆರ್'ಬಿಐ ಗವರ್ನರ್ ಉರ್ಜಿತ್ ಪಟೇಲ್ ಅವರು, ಬ್ಯಾಂಕಿಂಗ್ ವ್ಯವಸ್ಥೆ ಶುದ್ಧೀಕರಿಸಲು 'ನೀಲಕಂಠ' ವಿಷ ಕುಡಿಯಲೂ ಸಿದ್ಧ ಎಂದು ಗುರುವಾರ ಹೇಳಿದ್ದಾರೆ. 
ಗುಜರಾತ್ ರಾಜ್ಯದ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದಲ್ಲಿ ಮಾತನಾಡಿರುವ ಅವರು, ಬ್ಯಾಂಕಿಂಗ್ ವ್ಯವಸ್ಥೆ ಸುಧಾರಿಸುವುದಾದರೆ ಟೀಕೆಗಳನ್ನು ಎದುರಿಸಲು ಹಾಗೂ ನೀಲಕಂಠನಂತೆ ವಿಷ ಕುಡಿಯಲೂ ಕೂಡ ಆರ್'ಬಿಐ ಸಿದ್ಧವಿದೆ ಎಂದು ಹೇಳಿದ್ದಾರೆ. 
ಬ್ಯಾಂಕಿಂಗ್ ಕ್ಷೇತ್ರದಲ್ಲಿ ನಡೆದ ವಂಚನೆ, ಅಕ್ರಮಗಳು ಹಾಗೂ ಹಗರಣಗಳನ್ನು ಗಮನಿಸಿದಾಗ ಆರ್'ಬಿಐ ಗೆ ಬಹಳ ನೋವು ಮತ್ತು ಕ್ರೋದ ಉಂಟಾಗುತ್ತಿದೆ. ಬಹುಕೋಟಿ ಬ್ಯಾಂಕ್ ಹಗರಣಗಳು ದೇಶದ ಭವಿಷ್ಯವನ್ನು ಲೂಟಿ ಮಾಡುತ್ತಿವೆ. ಬ್ಯಾಂಕ್ ಹಾಗೂ ಉದ್ಯಮಗಳ ನಡುವೆ ಇರುವ ಅಪವಿತ್ರ ಬಂಧವನ್ನು ಮುರಿಯಲೇಬೇಕಿದೆ. ಬ್ಯಾಂಕ್ ಖಾತೆದಾರರ ಹಿತಕ್ಕಾಗಿ ಏನೆಲ್ಲಾ ಸಾಧ್ಯವೋ ಅವುಗಳನ್ನು ಮಾಡಲು ಆರ್'ಬಿಎ ಸಿದ್ಧವಿದೆ ಎಂದು ತಿಳಿಸಿದ್ದಾರೆ.
ವಜ್ರಗಳ ವ್ಯಾಪಾರಿ ನೀರವ್ ಮೋದಿ ಪಂಜಾಬ್ ನ್ಯಾಷನಲ್ ಬ್ಯಾಂಕ್'ನ ರೂ.12,967 ಕೋಟಿ ಹಗರಣದ ಬಗ್ಗೆ ಮಾತನಾಡಿದ ಪಟೇಲ್ ಅವರು, ಇದೇ ಮೊದಲ ಬಾರಿ ನೀರವ್ ಮೋದಿ ಪ್ರಕರಣದ ಬಗ್ಗೆ ಮಾತನಾಡುತ್ತಿದ್ದೇನೆ. ಆರ್'ಬಿಐ ಕೂಡ ಈ ಬಗ್ಗೆ ನೋವಾಗಿದೆ ಹಾಗೂ ಕೋಪ ಕೂಡ ಇದೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.
ದೇಶದ ಸಾಲ ವ್ಯವಸ್ಥೆಯನ್ನು ಶುದ್ಧೀಕರಿಸಲು ಆರ್'ಬಿಐ ಕ್ರಮ ಕೈಗೊಂಡಿದೆ. ಈ ಅಮೃತ ಮಂಥನ ಕಾರ್ಯದಲ್ಲಿ ರಾಕ್ಷಸರ ಪಕ್ಷ ವಹಿಸುವ ಬದಲು ದೇವತೆಗಳ ಪಕ್ಷ ವಹಿಸಿ ಎಂದು ಇದೇವೇಳೆ ಬ್ಯಾಂಕ್ ಗಳಿಗೆ ಹಾಗೂ ಪ್ರವರ್ತಕರಿಗೆ ಕಿವಿಮಾತು ಹೇಳಿದ್ದಾರೆ. 
ವಿಸ್ತಾರವಾದ ಬ್ಯಾಂಕಿಂಗ್ ಕ್ಷೇತ್ರದ ಯಾವುದೇ ಒಂದು ಕಡೆ ವಂಚನೆ ನಡೆಯುತ್ತಿದೆ ಎಂದು ಮೊದಲೇ ಗೊತ್ತುಪಡಿಸಿ ನಿಯಂತ್ರಿಸುವುದು ಅಸಾಧ್ಯವಾಗಿರುತ್ತದೆ. ಖಾಸಗಿ ಮತ್ತು ಸಾರ್ವಜನಿಕ ಕ್ಷೇತ್ರದ ಬ್ಯಾಂಕ್ ಗಳ ನಿಯಂತ್ರಣ ವ್ಯವಸ್ಥೆ ಸರಿಸಮಾನವಾಗಿಬೇಕು. ಸಾಧನೆಯ ಶ್ರೇಯ ಪಡೆಯಲು ಹಲವು ಮುಂದೆ ಬರುತ್ತಾರೆ. ಆದರೆ, ವೈಫಲ್ಯದ ಹೊಣೆಯನ್ನು ಯಾರೊಬ್ಬರೂ ಹೊರುವುದಿಲ್ಲ ಎಂದಿದ್ದಾರೆ. 
SCROLL FOR NEXT