ವಾಣಿಜ್ಯ

ಐಡಿಬಿಐ ವಂಚನೆ ಬಳಿಕ ಸಾರ್ವಜನಿಕ ವಲಯ ಬ್ಯಾಂಕುಗಳಿಂದ ವರದಿ ಕೇಳಿದ ಪ್ರಧಾನಮಂತ್ರಿ ಕಾರ್ಯಾಲಯ

Sumana Upadhyaya

ನವದೆಹಲಿ: ಇತ್ತೀಚೆಗೆ ಬ್ಯಾಂಕ್ ಹಗರಣ ಬಹಿರಂಗವಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ಕಚೇರಿ ಹಣಕಾಸು ಸಚಿವಾಲಯದಿಂದ ವರದಿ ಕೇಳಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ನಂತರ ಇತ್ತೀಚೆಗೆ ಐಡಿಬಿಐ ಬ್ಯಾಂಕಿನ ಸಾಲ ವಂಚನೆ ಕೂಡ ಕೇಳಿಬಂದಿತ್ತು.

ಐಡಿಬಿಐ ವಂಚನೆ ಕೇಸಿನಲ್ಲಿ ಹಲವು ಸಾರ್ವಜನಿಕ ವಲಯ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳ ಕಾರ್ಯಕಾರಿ ಮತ್ತು ಉನ್ನತ ಅಧಿಕಾರಿಗಳು ಭಾಗಿಯಾಗಿರುವ ಆರೋಪ ಕೇಳಿಬರುತ್ತಿದ್ದು ಸರ್ಕಾರಕ್ಕೆ ತೀವ್ರ ಮುಜುಗರವಾಗಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕಿನಲ್ಲಿ ಕೋಟ್ಯಂತರ ರೂಪಾಯಿ ವಂಚನೆ ಪ್ರಕರಣ ಬಯಲಿಗೆ ಬಂದ ನಂತರ ಪ್ರಧಾನ ಮಂತ್ರಿ ಕಾರ್ಯಾಲಯ ಸೂಕ್ಷ್ಮ ನಿಗಾ ವಹಿಸಿದೆ.

ಹಣಕಾಸು ಸಚಿವಾಲಯದಿಂದ ಈ ಬಗ್ಗೆ ವಿವರವಾದ ವರದಿ ಕೇಳಿರುವ ಪ್ರಧಾನ ಮಂತ್ರಿ ಕಾರ್ಯಾಲಯ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಪ್ರಾಧಿಕಾರಗಳಿಂದ ಕ್ರಿಯಾ ಯೋಜನೆ ತರಿಸಿಕೊಳ್ಳಲು ನಿರ್ಧರಿಸಿದೆ ಎಂದು ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ತಿಳಿಸಿದ್ದಾರೆ. ಮೇ 15ರೊಳಗೆ ಈ ವರದಿ ತಲುಪಬೇಕು. ಇದು ಐಡಿಬಿಐ ಸಾಲ ಕೇಸಿನ ನಂತರದ್ದಾಗಿದೆ ಎಂದು ಹೇಳಿದ್ದಾರೆ.

ಭಾರತೀಯ ಬ್ಯಾಂಕಿಂಗ್ ವಲಯಗಳಲ್ಲಿ ಇತ್ತೀಚೆಗೆ ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣ ಭಾರೀ ಸುದ್ದಿಯಾಗಿತ್ತು. ಆ ಬಳಿಕ ಐಡಿಬಿಐ ವಂಚನೆ ಕೇಸು ಇತ್ತೀಚಿನ ಉದಾಹರಣೆಯಾಗಿದೆ. ಐಸಿಐಸಿಐ ಬ್ಯಾಂಕಿನ ಚಂದ ಕೊಚ್ಚರ್ ಅವರ ಅಕ್ರಮ ಕೂಡ ಬಯಲಿಗೆ ಬಂದಿತ್ತು. ಇತ್ತೀಚಿನ ವರ್ಷಗಳಲ್ಲಿ ಬ್ಯಾಂಕುಗಳು ಅನುತ್ಪಾದಕ ಆಸ್ತಿ ಬಿಕ್ಕಟ್ಟನ್ನು ಅನುಭವಿಸುತ್ತಿರುವಾಗಲೇ ಈ ವಂಚನೆಗಳೆಲ್ಲವೂ ಬಯಲಿಗೆ ಬಂದಿದೆ.

SCROLL FOR NEXT