ಸಚಿನ್ ಬನ್ಸಾಲ್ ಮತ್ತು ಬಿನ್ನಿ ಬನ್ಸಾಲ್
ನವದೆಹಲಿ: ದೇಶದ ಅತಿ ದೊಡ್ಡ ಇ-ಕಾಮರ್ಸ್ ಸಂಸ್ಥೆ ಫ್ಲಿಪ್ ಕಾರ್ಟ್ ಗ್ರೂಪ್ ಸಿಇಒ ಬಿನ್ನಿ ಬನ್ಸಾಲ್ ಅವರು ಮಂಗಳವಾರ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎಂದು ಮಾತೃಸಂಸ್ಥೆ ವಾಲ್ ಮಾರ್ಟ್ ತಿಳಿಸಿದೆ.
ಬನ್ಸಾಲ್ ಅವರ ವಿರುದ್ಧ ಗಂಭೀರ ಸ್ವರೂಪದ ವೈಯಕ್ತಿಕ ದುರ್ವರ್ತನೆ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ಆದರೆ ಬನ್ಸಾಲ್ ಅವರು ತಮ್ಮ ವಿರುದ್ಧದ ಆರೋಪಗಳನ್ನು ಬಲವಾಗಿ ತಳ್ಳಿಹಾಕಿದ್ದಾರೆ ಎಂದು ಫ್ಲಿಪ್ ಕಾರ್ಟ್ ಸ್ವಾಧೀನಪಡಿಸಿಕೊಂಡಿರುವ ವಾಲ್ ಮಾರ್ಟ್ ಪ್ರಕಟಣೆಯಲ್ಲಿ ತಿಳಿಸಿದೆ.
ವಾಲ್ ಮಾರ್ಟ್ ಮತ್ತು ಫ್ಲಿಪ್ ಕಾರ್ಟ್ ನಡೆಸಿದ ಸ್ವತಂತ್ರ ತನಿಖೆಯಲ್ಲಿ ಬಿನ್ನಿ ಬನ್ಸಾಲ್ ವಿರುದ್ಧ ಕೇಳಿಬಂದಿರುವ ಆರೋಪಗಳನ್ನು ದೃಢೀಕರಿಸುವ ಯಾವುದೇ ಸಾಕ್ಷ್ಯಾಧಾರಗಳು ದೊರೆತಿಲ್ಲ. ಆದರೆ ಆರೋಪಗಳಿಗೆ ಬಿನ್ನಿ ಅವರ ಪ್ರತಿಕ್ರಿಯೆಯಲ್ಲಿ ಪಾರದರ್ಶಕತೆ ಕೊರತೆ ಇದೆ ಎಂದು ವಾಲ್ ಮಾರ್ಟ್ ಹೇಳಿದೆ.
ಆರು ತಿಂಗಳ ಹಿಂದಷ್ಟೇ ಅಮೆರಿಕದ ರಿಟೇಲ್ ದೈತ್ಯ ವಾಲ್ ಮಾರ್ಟ್ ಫ್ಲಿಪ್ ಕಾರ್ಟ್ ಅನ್ನು ಖರೀದಿಸಿತ್ತು. ಇದರ ಬೆನ್ನಲ್ಲೇ ಫ್ಲಿಪ್‌ಕಾರ್ಟ್ ಸಹಸಂಸ್ಥಾಪಕ ಸಚಿನ್ ಬನ್ಸಾಲ್ ಸಂಸ್ಥೆಗೆ ವಿದಾಯ ಹೇಳಿದ್ದರು. ಈಗ ಬಿನ್ನಿ ಬನ್ಸಾಲ್ ಸಹ ಫ್ಲಿಪ್ ಕಾರ್ಟ್ ತೊರೆದಿದ್ದಾರೆ.