ನವದೆಹಲಿ: ಸಾಲದ ಸುಳಿಯಲ್ಲಿ ಸಿಲುಕಿದ್ದ ಇನ್ಫ್ರಾಸ್ಟ್ರಕ್ಚರ್ ಲೀಸಿಂಗ್ ಆಂಡ್ ಫೈನಾನ್ಶಿಯಲ್ ಸರ್ವೀಸಸ್ (ಐಎಲ್ ಆಂಡ್ ಎಫ್‌ಎಸ್) ಅನ್ನು ಕೇಂದ್ರ ಸರ್ಕಾರ ಸೋಮವಾರ ತನ್ನ ವಶಕ್ಕೆ ಪಡೆದುಕೊಂಡಿದೆ.
91 ಸಾವಿರ ಕೋಟಿ ರುಪಾಯಿ ಸಾಲದಲ್ಲಿರುವ ಕಂಪನಿಯ ಆಡಳಿತ ಮಂಡಳಿಯನ್ನು ತೆಗೆದು ಹಾಕುವಂತೆ ಕೇಂದ್ರ ಸರ್ಕಾರ ಇಂದು ರಾಷ್ಟ್ರೀಯ ಕಂಪನಿ ಕಾನೂನು ಪ್ರಾಧಿಕಾರ(ಎನ್ ಸಿ ಎಲ್ ಟಿ)ಕ್ಕೆ ಮನವಿ ಸಲ್ಲಿಸಿದೆ. ಅಲ್ಲದೆ ಪ್ರಸ್ತೂತ ನಿರ್ದೇಶಕರನ್ನು ಮುಂದುವರೆಸುವುದು ಹಾನಿಕಾರಕ ಮತ್ತು ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧ ಎಂದು ಎಚ್ಚರಿಸಿದೆ.
ಕೊಟಕ್ ಮಹೀಂದ್ರಾ ಬ್ಯಾಂಕ್ ಎಂಡಿ ಉದಯ್ ಕೊಟಕ್ ಅವರು ಸೇರಿದಂತೆ 10 ನಿರ್ದೇಶಕರ ನೇಮಕಕ್ಕೆ ಒಪ್ಪಿಗೆ ನೀಡುವಂತೆಯೂ ಸರ್ಕಾರ ಎನ್ ಸಿ ಎಲ್ ಟಿ ಕೇಳಿಕೊಂಡಿದೆ.
ಐಎಲ್ ಆಂಡ್ ಎಫ್‌ಎಸ್ ಷೇರುದಾರರು ಸಾಲದ ಸುಳಿಯಿಂದ ಸಂಸ್ಥೆಯನ್ನು ಪಾರುಮಾಡಲು ಸಮ್ಮತಿಸಿದ್ದು, ಅದರ ಅನ್ವಯ ಕೇಂದ್ರ ಸರಕಾರ ಸಂಸ್ಥೆಯನ್ನು ತನ್ನ ಸುಪರ್ದಿಗೆ ಪಡೆದುಕೊಂಡಿದೆ.