ನವದೆಹಲಿ: ಬ್ಯಾಂಕುಗಳಿಂದ ಮರುಪಾವತಿಯಾಗದ ಅನುತ್ಪಾದಕ ಸಾಲಗಳ ಬಗ್ಗೆ ಇತ್ತೀಚೆಗೆ ರಿಸರ್ವ್ ಬ್ಯಾಂಕಿನ ಮಾಜಿ ಗವರ್ನರ್ ರಘುರಾಮ್ ರಾಜನ್ ಕೇಂದ್ರ ಸರ್ಕಾರಕ್ಕೆ ಬರೆದ ಪತ್ರವನ್ನು ಕೊನೆಗೂ ಗಂಭೀರವಾಗಿ ಪರಿಗಣಿಸಿದಂತಿದ್ದು, ಸರ್ಕಾರ ಸ್ವೀಕರಿಸಿರುವ ಎಲ್ಲಾ ವರದಿಗಳನ್ನು ಪರಾಮರ್ಶಿಸುವಂತೆ ಕೇಂದ್ರ ಸರ್ಕಾರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರುಗಳಿಗೆ ಸೂಚಿಸಿದೆ.
ಪುನರ್ ಅವಲೋಕನ ಮತ್ತು ಪರಾಮರ್ಶೆಯಲ್ಲಿ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿರುವ ವ್ಯಕ್ತಿಗಳ ಕುರಿತು ಎಚ್ಚರಿಕೆ ನೀಡುವುದು ಮಾತ್ರವಲ್ಲದೆ ತನಿಖಾಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ಆರೋಪದಲ್ಲಿ ಅಂತರ ಇಲಾಖೆ ಪತ್ರಗಳನ್ನು ಕೂಡ ಉಲ್ಲೇಖಿಸಲಾಗಿದೆ. ಉನ್ನತ ಮೂಲಗಳಿಂದ ಸಿಕ್ಕಿರುವ ಮಾಹಿತಿ ಪ್ರಕಾರ, ರಘುರಾಮ್ ರಾಜನ್ ಅವರು ಬರೆದ ಪತ್ರವನ್ನು ನೇರವಾಗಿ ಸಂಸದೀಯ ಸಮಿತಿಗೆ ಉಲ್ಲೇಖಿಸಲಾಗಿದೆ. ರಾಜನ್ ಬರೆದಿದ್ದ ಪತ್ರದಲ್ಲಿ ಅನುತ್ಪಾದಕ ಸಾಲಗಳ ಬಗ್ಗೆ ಉಲ್ಲೇಖಿಸಿದ್ದು ಮಾತ್ರವಲ್ಲದೆ ಸಾಲ ಹಿಂತಿರುಗಿಸದವರ ಹೆಸರುಗಳನ್ನು ಕೂಡ ಪ್ರಸ್ತಾಪಿಸಿದ್ದಾರೆ ಎನ್ನಲಾಗಿದೆ.
ತಾವು ಬರೆದ ಪತ್ರಕ್ಕೆ ಪ್ರಧಾನ ಮಂತ್ರಿ ಕಚೇರಿಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಸೆಪ್ಟೆಂಬರ್ 6ರಂದು ಬರೆದ ಪತ್ರದಲ್ಲಿ ರಾಜನ್ ಸಂಸದೀಯ ಅಂದಾಜು ಸಮಿತಿಗೆ ಬರೆದಿದ್ದರು.
ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಅಧಿಕಾರಿಯೊಬ್ಬರು, ಪ್ರಧಾನ ಮಂತ್ರಿ ಕಚೇರಿಗೆ ಏನೇ ದೂರುಗಳು ಬಂದರೂ ಅದರ ಪ್ರತಿಯನ್ನು ಪರಿಶೀಲಿಸುವಂತೆ ಸಂಬಂಧಪಟ್ಟ ಇಲಾಖೆಗೆ ಹಸ್ತಾಂತರಿಸುತ್ತದೆ. ಆದರೆ ಪ್ರಧಾನ ಮಂತ್ರಿ ಕಚೇರಿ ಇತ್ತೀಚೆಗೆ ಕೆಲವು ಉನ್ನತ ಕೇಸುಗಳಾದ ನೀರವ್ ಮೋದಿ, ಮೆಹುಲ್ ಚೋಕ್ಸಿ ಸೇರಿದಂತೆ ಕೆಲವು ಕೇಸುಗಳನ್ನು ಸಂಬಂಧಪಟ್ಟ ಇಲಾಖೆಗೆ ಹಸ್ತಾಂತರಿಸಿಲ್ಲ ಎಂಬ ಆರೋಪ ಮಾಡಿದ್ದಾರೆ.
ಅವುಗಳಲ್ಲಿ ಒಂದು ಬೆಂಗಳೂರು ಮೂಲದ ಜ್ಯುವೆಲ್ಲರ್ ಹರಿ ಪ್ರಸಾದ್ ಎಸ್ ವಿ ಅವರದ್ದು. ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿ ವಿರುದ್ಧ ತನಿಖೆ ನಡೆಸುವಂತೆ 2016ರ ಜುಲೈ 26ರಂದು ಜಾರಿ ನಿರ್ದೇಶನಾಲಯ, ಸಿಬಿಐ, ಸೆಬಿ, ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ ಮತ್ತು ಪ್ರಧಾನ ಮಂತ್ರಿ ಕಚೇರಿಗೆ ದೂರು ಸಲ್ಲಿಸಿದ್ದರು.
ರಘುರಾಮ್ ರಾಜನ್ ಹೇಳಿದ್ದೇನು?: ''ನಾನು ಪ್ರಧಾನ ಮಂತ್ರಿ ಕಚೇರಿಗೆ ಕೆಲವು ಉನ್ನತ ಮಟ್ಟದ ಕೇಸುಗಳನ್ನು ತನಿಖೆ ನಡೆಸಿ ಕನಿಷ್ಠ ಒಬ್ಬಿಬ್ಬರ ಮೇಲಾದರೂ ಕ್ರಮ ಕೈಗೊಳ್ಳಿ ಎಂದು ನಾನು ಒತ್ತಾಯಿಸಿದೆ. ಆದರೆ ಇದರಲ್ಲಿ ಯಾವುದೇ ಪ್ರಗತಿಯಾಗಿದೆ ಎಂದು ನನಗೆ ಅನಿಸುತ್ತಿಲ್ಲ. ನಾನು ಗವರ್ನರ್ ಆಗಿದ್ದಾಗ ಆರ್ ಬಿಐ ವಂಚನೆ ನಿರ್ವಹಣೆ ಕೇಂದ್ರವನ್ನು ಸ್ಥಾಪಿಸಿತ್ತು. ಈ ಮೂಲಕ ವಂಚನೆ ಪ್ರಕರಣವನ್ನು ಶೀಘ್ರವೇ ತನಿಖೆ ನಡೆಸಿ ಇತ್ಯರ್ಥಪಡಿಸುವುದು ಆಗಿತ್ತು. ಈ ವಿಷಯವನ್ನು ತುರ್ತಾಗಿ ಗಮನಹರಿಸಬೇಕಾದ ಅಗತ್ಯವಿದೆ'' ಎಂದು ಪತ್ರದಲ್ಲಿ ಹೇಳಿದ್ದಾರೆ.