ಮುಂಬೈ: ಭಾರತೀಯ ಕರೆನ್ಸಿ ಮೌಲ್ಯ ಕುಸಿತಕ್ಕೆ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರ ಮುಂದಾಗಿದ್ದರೂ ಕೂಡ ವಾರದ ಆರಂಭದ ದಿನವಾದ ಇಂದು ಡಾಲರ್ ಮೌಲ್ಯ ಮತ್ತೆ ಕುಸಿತ ಕಂಡುಬಂದಿದೆ. ಅಮೆರಿಕನ್ ಡಾಲರ್ ಎದುರು ರೂಪಾಯಿ ಮೌಲ್ಯ 81 ಪೈಸೆಯಷ್ಟು ಇಳಿಕೆಯಾಗಿ 72 ರೂಪಾಯಿ 65 ಪೈಸೆಯಲ್ಲಿ ನಿಂತಿದೆ.
ಚೀನಾದೊಂದಿಗೆ ಮತ್ತೊಂದು ಸುತ್ತಿನ ವ್ಯಾಪಾರ ಕದನ ಆರಂಭಿಸುವುದಾಗಿ ಅಮೆರಿಕಾ ಇಂದು ಮತ್ತೆ ಘೋಷಿಸಿದೆ ಎನ್ನಲಾಗುತ್ತಿದೆ. ಚೀನಾದ ಹೆಚ್ಚುವರಿ 200 ಶತಕೋಟಿ ಡಾಲರ್ ಆಮದಿನ ಮೇಲೆ ಅಮೆರಿಕ ಹೊಸ ವ್ಯಾಪಾರ ಆಮದು ದರ ವಿಧಿಸುವುದಾಗಿ ಘೋಷಿಸಿರುವುದರಿಂದ ಭಾರತದ ಕರೆನ್ಸಿ ಮೌಲ್ಯ ಮತ್ತೆ ಕುಸಿತ ಕಂಡುಬಂದಿದೆ ಎನ್ನಲಾಗಿದೆ.
ಕಳೆದ ಶುಕ್ರವಾರ ಡಾಲರ್ ಎದುರು ರೂಪಾಯಿ ಬೆಲೆ 34 ಪೈಸೆಯಷ್ಟು ಏರಿಕೆಯಾಗಿತ್ತು. ಈ ಮಧ್ಯೆ ಮುಂಬೈ ಷೇರು ಮಾರುಕಟ್ಟೆಯ ವಹಿವಾಟು ಆರಂಭದ ದಿನವಾದ ಇಂದು ಸೆನ್ಸೆಕ್ಸ್ 295 ಅಂಕ ಏರಿಕೆಯಾಗಿ 37 ಸಾವಿರದ 795ರಲ್ಲಿ ವಹಿವಾಟು ನಡೆಸಿತು.