ವಾಣಿಜ್ಯ

35-40 ರೂ.ಗೆ ಪೆಟ್ರೋಲ್‌, ಡೀಸೆಲ್: ಬಾಬಾ ರಾಮ್‌ದೇವ್‌ ಹೊಸ ಆಫರ್, ಆದರೆ ಷರತ್ತುಗಳು ಅನ್ವಯ!

Srinivasamurthy VN
ನವದೆಹಲಿ: ಪತಂಜಲಿ ಸಂಸ್ಥೆಯ ಮೂಲಕ ಭಾರತೀಯ ಮಾರುಕಟ್ಟೆ ಮೇಲೆ ನಿಯಂತ್ರಣ ಸಾಧಿಸಿರುವ ಯೋಗ ಗುರು ಬಾಬಾ ರಾಮ್ ದೇವ್ ಇದೀಗ ತೈಲೋತ್ಪನ್ನ ಮಾರುಕಟ್ಟೆ ಮೇಲೂ ಕಣ್ಣಿಟ್ಟಿದ್ದು, 35-40 ರೂ.ಗೆ ಪೆಟ್ರೋಲ್‌, ಡೀಸೆಲ್ ಮಾರಾಟ ಮಾಡುವುದಾಗಿ ಹೇಳಿದ್ದಾರೆ.
ತೈಲೋತ್ಪನ್ನಗಳ ಬೆಲೆ ಹೊಸ ದಾಖಲೆಗಳೊಂದಿಗೆ ಗಗನಕ್ಕೇರುತ್ತಿರುವ ನಡುವೆಯೇ ಯೋಗಗುರು ಬಾಬಾ ರಾಮ್‌ದೇವ್‌ 35-40 ರೂ.ಗೆ ಪೆಟ್ರೋಲ್‌, ಡೀಸೆಲ್‌ ಮಾರುವ ಕುರಿತು ಮಾತನಾಡಿದ್ದಾರೆ. ದಿನೇ ದಿನೇ ಗಗನಕ್ಕೇರುತ್ತಿರುವ ತೈಲೋತ್ಪನ್ನಗಳ ಬೆಲೆ ಕುರಿತು ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಬಾಬಾ ರಾಮ್ ದೇವ್, 'ಒಂದೊಮ್ಮೆ ಕೇಂದ್ರ ಸರ್ಕಾರ ನನಗೆ ಅವಕಾಶ ನೀಡಿದರೆ, ಕೆಲವು ತೆರಿಗೆ ವಿನಾಯಿತಿ ಕೊಟ್ಟರೆ 35-40 ರೂ.ಗಳಿಗೆ ಪೆಟ್ರೋಲ್‌, ಡೀಸೆಲ್‌ ಒದಗಿಸಬಲ್ಲೆ ಎಂದು ಹೇಳಿದ್ದಾರೆ. 
ತೈಲ ದರಗಳು ಜನರ ಜೇಬನ್ನು ಬರಿದುಗೊಳಿಸುತ್ತಿರುವುದರಿಂದ ಅವುಗಳನ್ನು ಜಿಎಸ್ ಟಿಯಡಿಗೆ ತರಬೇಕು ಎಂದು ರಾಮ್ ದೇವ್‌ ಆಗ್ರಹಿಸಿದರು. ಆದರೆ, ಸರ್ಕಾರ ಚಿಂತಿಸುತ್ತಿರುವಂತೆ ಶೇ.28 ತೆರಿಗೆ ಶ್ರೇಣಿಗೆ ಹಾಕಬಾರದು, ಅತಿ ಕಡಿಮೆ ತೆರಿಗೆ ಶ್ರೇಣಿಗೆ ಹಾಕಬೇಕು ಎಂದು ರಾಮ್ ದೇವ್ ಆಗ್ರಹಿಸಿದರು.  ತೈಲದ ಮೇಲಿನ ಅಬಕಾರಿ ಸುಂಕ ಇಳಿಸಲು ನಿರಾಕರಿಸುತ್ತಿರುವ ಸರ್ಕಾರದ ನಿಲುವನ್ನು ಪ್ರಶ್ನಿಸಿರುವ ಅವರು, ಒಂದೊಮ್ಮೆ ಆದಾಯ ನಷ್ಟವಾದರೆ ಸರ್ಕಾರವೇನೂ ಕೆಲಸ ಮಾಡುವುದನ್ನು ನಿಲ್ಲಿಸುವುದಿಲ್ಲ. ಅದರ ಬದಲು ಶ್ರೀಮಂತರಿಗೆ ತೆರಿಗೆ ಹಾಕಿ ಆದಾಯ ಪಡೆಯಬಹುದು ಎಂಬ ಸಲಹೆ ನೀಡಿದ್ದಾರೆ. ಹೆಚ್ಚುತ್ತಿರುವ ತೈಲ ದರ, ರೂಪಾಯಿ ದರ ಕುಸಿತದಿಂದ ಮೋದಿ ಸರ್ಕಾರಕ್ಕೆ ಕಷ್ಟವಿದೆ ಎಂದು ರಾಮ್ ದೇವ್‌ ಅಭಿಪ್ರಾಯಪಟ್ಟರು.
ದರ ಇಳಿಸದಿದ್ದರೆ ಮೋದಿ ಪರ ಪ್ರಚಾರ ಮಾಡೊಲ್ಲ 
ಇದೇ ವೇಳೆ ಕೇಂದ್ರ ಸರ್ಕಾರ ಆದಷ್ಟು ಬೇಗ ತೈಲ ದರ ಇಳಿಸದಿದ್ದರೆ 2019ರ ಚುನಾವಣೆಯಲ್ಲಿ ಮೋದಿ ಪರ ಪ್ರಚಾರ ಮಾಡುವುದಿಲ್ಲ ಎಂದೂ ರಾಮ್ ದೇವ್‌ ಹೇಳಿದ್ದಾರೆ. 2014ರಲ್ಲಿ ಬಿಜೆಪಿ ಪರ ಪ್ರಚಾರ ಮಾಡಿದ್ದ ಅವರು ಮೋದಿ ಜನರ ಸಂಕಷ್ಟಗಳಿಗೆ ಸ್ಪಂದಿಸಬೇಕಾಗಿದೆ ಎಂದಿದ್ದಾರೆ.  'ನಾನು ಬಲಪಂಥೀಯನೂ ಅಲ್ಲ ಎಡಪಂಥೀಯನೂ ಅಲ್ಲ. ನಾನು ಇಬ್ಬರ ವಿಚಾರಧಾರೆಗಳನ್ನೂ ಗೌರವಿಸುತ್ತೇನೆ. ನಾನು ಯಾವ ಪಕ್ಷದ ಪರವಾಗಿಯೂ ಇಲ್ಲ. ನಾನು ಸ್ವತಂತ್ರ. ಆದ್ದರಿಂದಲೇ ಹಲವು ವಿಷಯಗಳಲ್ಲಿ ಮೌನ ಯೋಗವನ್ನು ಅನುಕರಿಸಿದ್ದೇನೆ ಎಂದು ಹೇಳಿದರು.  ದೇಶದಲ್ಲಿ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳನ್ನು ಪ್ರಸ್ತಾಪಿಸಿದ ರಾಮ್ ದೇವ್‌, ಲೈಂಗಿಕ ದೌರ್ಜನ್ಯಗಳಿಗೆ ನಗ್ನತೆಯೂ ಒಂದು ಕಾರಣ ಎಂದಿದ್ದಾರೆ. ನಾನು ಆಧುನಿಕ ಮನುಷ್ಯ. ಆದರೆ, ಆಧುನೀಕತೆಯೆಂದರೆ ನಗ್ನತೆಯಲ್ಲ. ನಾವು ನಾಗರಿಕ ಸಮಾಜದಲ್ಲಿ ಬದುಕುತ್ತಿದ್ದೇವೆ ಎಂಬುದನ್ನು ಮರೆಯಬಾರದು ಎಂದು ಹೇಳಿದರು.
SCROLL FOR NEXT