ಲಂಡನ್: ಜೆಟ್ ಏರ್ವೇಸ್ ಗೆ ಬಂದೊದಗಿರುವ ಪರಿಸ್ಥಿತಿಯ ಬಗ್ಗೆ ಟ್ವೀಟ್ ಮಾಡಿರುವ ಸುಸ್ತಿದಾರ ವಿಜಯ್ ಮಲ್ಯ, "ನಾನು ಪೂರ್ತಿ ಸಾಲ ವಾಪಸ್ ಕೊಡ್ತೀನಿ ಅಂದರೂ ಬ್ಯಾಂಕ್ ಗಳು ತೆಗೆದುಕೊಳ್ಳುವುದಕ್ಕೆ ಸಿದ್ಧವಿಲ್ಲ ಎಂದು ಹೇಳಿದಾರೆ.
ಜೆಟ್ ಏರ್ವೇಸ್ ಗೆ ಬಂದೊದಗಿರುವ ಸ್ಥಿತಿಯನ್ನು ತಮ್ಮ ಕಿಂಗ್ ಫಿಶರ್ ಏರ್ಲೈನ್ಸ್ ನ ಪತನಕ್ಕೆ ಹೋಲಿಕೆ ಮಾಡಿರುವ ವಿಜಯ್ ಮಲ್ಯ, "ಕಿಂಗ್ ಫಿಶರ್ ಸೇರಿದಂತೆ ಭಾರತದ ಅನೇಕ ವಿಮಾನ ಸಂಸ್ಥೆಗಳು ಕುಸಿದಿವೆ ಎಂದು ಟ್ವಿಟರ್ ನಲ್ಲಿ ಬರೆದುಕೊಂಡು ಬೇಸರ ವ್ಯಕ್ತಪಡಿಸಿದ್ದಾರೆ.
ನಿಜವಾದ ಉದ್ಯಮ ವಿಫಲವಾಗುತ್ತದೆ. ನಾನು ತೆಗೆದುಕೊಂಡಿರುವ ಸಾಲವನ್ನು ಶೇ.100 ರಷ್ಟು ವಾಪಸ್ ಪಾವತಿ ಮಾಡುತ್ತೇನೆ ಅಂದರೂ ನನ್ನ ಮೇಲೆ ಸಿಬಿಐ/ಇಡಿ ಕ್ರಿಮಿನಲ್ ಪ್ರಕರಣ ದಾಖಲಿಸಿವೆ. ನನಗೇ ಯಾಕೆ ಹೀಗೆಂದು ಅಚ್ಚರಿಯಾಗುತ್ತದೆ ಎಂದು ವಿಜಯ್ ಮಲ್ಯ ಟ್ವಿಟರ್ ನಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.
ಜೆಟ್ ವಿಮಾನ ಸಂಸ್ಥೆ ಕುಸಿದಿದ್ದು, ಉದ್ಯೋಗಿಗಳಿಗೆ ವೇತನ ನೀಡಲೂ ಸಾಧ್ಯವಾಗದೇ ಇರುವ ಪರಿಸ್ಥಿತಿ ಎದುರಾಗಿರುವುದನ್ನು ಟಿವಿಯಲ್ಲಿ ನೋಡಿದೆ. ಇಲ್ಲಿ ನಾನು ತೆಗೆದುಕೊಂಡಿರುವ ಸಾಲ ಸಂಪೂರ್ಣ ವಾಪಸ್ ಕೊಡುತ್ತೇನೆ ಎಂದರೂ ಸಹ ಬ್ಯಾಂಕ್ ಗಳು ತೆಗೆದುಕೊಳ್ಳುವುದಕ್ಕೆ ಸಿದ್ಧವಿಲ್ಲ ಯಾಕೆ? ಎಂದು ಮಲ್ಯ ಪ್ರಶ್ನಿಸಿದ್ದಾರೆ.