ವಾಣಿಜ್ಯ

ಹೂಡಿಕೆಗೆ ಇನ್ನಷ್ಟು ಪೂರಕ ವಾತಾವರಣ ನಿರ್ಮಿಸಲು ಸರ್ಕಾರ ಬದ್ಧ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

Srinivasamurthy VN

ನವದೆಹಲಿ: ಭಾರತದಲ್ಲಿ ಹೂಡಿಕೆಗೆ ಇನ್ನಷ್ಟು ಪೂರಕ ವಾತಾವರಣ ನಿರ್ಮಿಸಲು ಸರ್ಕಾರ ಬದ್ಧವಾಗಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ದೆಹಲಿಯಲ್ಲಿ ನಡೆಯುತ್ತಿರುವ ಇಂಡಿಯಾ-ಸ್ವೀಡನ್​ ವಾಣಿಜ್ಯ ಶೃಂಗಸಭೆಯಲ್ಲಿ ಮಾತನಾಡಿದ ಅವರು, ನಮ್ಮ ದೇಶದಲ್ಲಿ ಹೂಡಿಕೆ ಮಾಡುವುದಕ್ಕೆ ಎಲ್ಲರನ್ನೂ ಆಹ್ವಾನಿಸುವ ಕೆಲಸವನ್ನು ನಾನು ಮಾಡಬಲ್ಲೆ ಮತ್ತು ಭಾರತ ಸರ್ಕಾರ ಹೂಡಿಕೆದಾರರಿಗೆ ಅನುಕೂಲವಾಗುವ ಎಲ್ಲ ಸುಧಾರಣಾಕ್ರಮಗಳನ್ನು ತೆಗೆದುಕೊಳ್ಳಲು ಬದ್ಧವಾಗಿದೆ. ಅದು ಬ್ಯಾಂಕಿಂಗ್ ಇರಬಹುದು ಅಥವಾ ಇನ್ಶೂರೆನ್ಸ್ ಇರಬಹುದು ಅಥವಾ ಮೈನಿಂಗ್ ಹೀಗೆ ಯಾವುದೇ ಸೆಕ್ಟರ್​ನಲ್ಲಾದರೂ ಸುಧಾರಣಾ ಕ್ರಮಗಳನ್ನು ಸರ್ಕಾರ ತೆಗೆದುಕೊಳ್ಳಲಿದೆ ಎಂದು ಭರವಸೆ ನೀಡಬಲ್ಲೆ ಎಂದು ಹೇಳಿದರು.

ಅಲ್ಲದೆ ಭಾರತವನ್ನು ಇನ್ನಷ್ಟು ಆಕರ್ಷಕ ಹೂಡಿಕೆಯ ತಾಣವನ್ನಾಗಿ ಪರಿವರ್ತಿಸುವ ಸಲುವಾಗಿ, ಇನ್ನೂ ಹೆಚ್ಚಿನ ಸುಧಾರಣಾ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮುಕ್ತ ಮನಸ್ಸು ಹೊಂದಿದೆ. ಮೂಲಸೌಕರ್ಯ ವಿಭಾಗದಲ್ಲಿ ಮುಂದಿನ ಐದು ವರ್ಷಗಳಲ್ಲಿ ಸರ್ಕಾರ ಒಂದು ಲಕ್ಷ ಕೋಟಿ ರೂ ಹೂಡಿಕೆ ಮಾಡಲಿದೆ ಎಂದು ಹೇಳಿದರು. ಅಂತೆಯೇ ಭಾರತದಲ್ಲಿನ ಮೂಲಸೌಕರ್ಯ ಪ್ರಾಜೆಕ್ಟ್​ಗಳಲ್ಲಿ ಹೂಡಿಕೆ ಮಾಡುವಂತೆ ಸ್ವೀಡನ್​ನ ಸಂಸ್ಥೆಗಳಿಗೆ ಆಹ್ವಾನ ನೀಡಿದರು. 

ಇದಲ್ಲದೆ ಕಾರ್ಪೊರೇಟ್ ಟ್ಯಾಕ್ಸ್​ ಹೊರೆ ಇಳಿಸುವುದಕ್ಕಾಗಿ ಭಾರತ ಸರ್ಕಾರ ಈಗಾಗಲೇ ಹಲವು ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಹೇಳಿದರು.

SCROLL FOR NEXT