ವಾಣಿಜ್ಯ

ಟೆಲಿಕಾಂ ಆಯ್ತು, ಈಗ ಇಂಧನ ಕ್ಷೇತ್ರಕ್ಕೂ ಕಾಲಿಟ್ಟ ಜಿಯೋ, 5 ಸಾವಿರಕ್ಕೂ ಅಧಿಕ ಪೆಟ್ರೋಲ್‌ ಬಂಕ್‌!

Srinivasamurthy VN

ನವದೆಹಲಿ: ಉಚಿತ ಕರೆ, ಉಚಿತ ಡಾಟಾ ಮೂಲಕ ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಕ್ರಾಂತಿ ಮೂಡಿಸಿದ್ದ ರಿಲಯನ್ಸ್ ಜಿಯೋ ಇದೀಗ ಇಂಧನ ಕ್ಷೇತ್ರಕ್ಕೂ ಕಾಲಿಡುವ ಮೂಲಕ ಗ್ರಾಹಕರ ಗಮನ ಕೇಂದ್ರೀಕರಿಸಿದೆ.

ಹೌದು.. ಮುಕೇಶ್‌ ಅಂಬಾನಿ ನೇತೃತ್ವದ ರಿಲಯನ್ಸ್‌ ಕಂಪನಿ ಇದೀಗ ಜಿಯೋ ಬ್ರ್ಯಾಂಡ್‌ ನಲ್ಲಿ ಇಂಧನ ಕ್ಷೇತ್ರಕ್ಕೆ ಕಾಲಿಡಲು ಭರ್ಜರಿ ಸಿದ್ಧತೆ ನಡೆಸಿದ್ದು, ಇಕ್ಕಾಗಿ ಬ್ರಿಟನ್‌ ಮೂಲದ ಬಿಪಿ ಸಂಸ್ಥೆ ಜತೆಗೂಡಿ ‘ಜಿಯೋ-ಬಿಪಿ ಹೆಸರಿನ’ ಪೆಟ್ರೋಲ್‌ ಪಂಪ್‌ ಗಳ ಸ್ಥಾಪನೆಗೆ ಯೋಜನೆ ರೂಪಿಸುತ್ತಿದೆ ಎನ್ನಲಾಗಿದೆ.

ಮೂಲಗಳ ಪ್ರಕಾರ ದೇಶಾದ್ಯಂತ ಜಿಯೋ-ಬಿಪಿ ಸಂಸ್ಥೆ ಸುಮಾರು ಐದು ಸಾವಿರ ಪೆಟ್ರೋಲ್ ಬಂಕ್ ಸ್ಥಾಪನೆಗೆ ಯೋಜನೆ ರೂಪಿಸಿವೆ ಎನ್ನಲಾಗಿದೆ. ಇದೇ ಕಾರಣಕ್ಕೆ ಟೆಲಿಕಾಂ ಕ್ಷೇತ್ರಕ್ಕೆ ಸೀಮಿತವಾಗಿದ್ದ ದರ ಸಮರ ಇದೀಗ ಇಂಧನ ಕ್ಷೇತ್ರಕ್ಕೂ ವ್ಯಾಪಿಸುವ ನಿರೀಕ್ಷೆ ಹೆಚ್ಚಾಗಿದ್ದು, ಇದರಿಂದಾಗಿ ಸರ್ಕಾರಿ ಸ್ವಾಮ್ಯದಪೆಟ್ರೋಲ್‌ ಪಂಪ್‌ಗಳಾದ ಬಿಪಿಸಿಎಲ್‌, ಎಚ್‌ಪಿಸಿಎಲ್‌, ಐಒಸಿ ಸೇರಿ ಇನ್ನಿತರ ಸಂಸ್ಥೆಗಳ ಮೇಲೆ ಹೊಡೆತ ಬೀಳುವ ಭೀತಿ ಎದುರಾಗಿದೆ. 

ಈಗಾಗಲೇ 1400 ಇರುವ ರಿಲಯನ್ಸ್‌ ಪಂಪ್‌ಗಳ ಸಂಖ್ಯೆ 5500ಕ್ಕಿಂತ ಹೆಚ್ಚಾಗುವ ಸಂಭವವಿದೆ. ಜಿಯೋ-ಬಿಪಿ ಪೆಟ್ರೋಲ್‌ ಪಂಪ್‌ಗಳು ರಾಷ್ಟ್ರೀಯ ಹೆದ್ದಾರಿ ಮತ್ತು ನಗರ ಪ್ರದೇಶಗಳಲ್ಲಿ ಸ್ಥಾಪನೆ ಮಾಡುವ ಮಹಾ ಉದ್ದೇಶವನ್ನು ಹೊಂದಿದ್ದು, ಇದರಿಂದ ಹೆದ್ದಾರಿಗಳಲ್ಲಿ ಅತಿಹೆಚ್ಚು ಪೆಟ್ರೋಲ್‌ ಪಂಪ್‌ ಹೊಂದಿರುವ ಸರ್ಕಾರಿ ಸ್ವಾಮ್ಯದ ಬಿಪಿಸಿಎಲ್‌ ಹಾಗೂ ನಗರ ಪ್ರದೇಶದ ವ್ಯಾಪ್ತಿಗಳಲ್ಲಿರುವ ಎಚ್‌ಪಿಸಿಎಲ್‌ಗೆ ಅತಿಹೆಚ್ಚು ಹೊಡೆತ ನೀಡುವ ಸಾಧ್ಯತೆಯಿದೆ ಎಂಬ ವಿಶ್ಲೇಷಣೆಗಳು ವಾಣಿಜ್ಯ ವಲಯದಿಂದ ಕೇಳಿಬರುತ್ತಿವೆ.

SCROLL FOR NEXT