ವಾಣಿಜ್ಯ

ಖಾಸಗೀಕರಣ: ಮಂಗಳೂರು ಸೇರಿ ಐದು ವಿಮಾನ ನಿಲ್ದಾಣ ಅದಾನಿ ತೆಕ್ಕೆಗೆ

Lingaraj Badiger
ನವದೆಹಲಿ: ಗುಜರಾತ್ ಮೂಲದ ಗೌತಮ್ ಅದಾನಿ ಒಡೆತನದ ಅದಾನಿ ಗ್ರೂಪ್ ಈಗ ಅಧಿಕೃತವಾಗಿ ವಿಮಾನಯಾನ ಕ್ಷೇತ್ರಕ್ಕೆ ಕಾಲಿಟ್ಟಿದ್ದು, ಮಂಗಳೂರು ಸೇರಿದಂತೆ ದೇಶದ ಐದು ವಿಮಾನ ನಿಲ್ದಾಣಗಳ ನಿರ್ವಹಣೆಯನ್ನು ಅದಾನಿ ಕಂಪನಿ ಪಡೆದುಕೊಂಡಿದೆ.
ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ(ಎಎಐ)ದ ವ್ಯಾಪ್ತಿಯಲ್ಲಿ ಬರುವ ಒಟ್ಟು 6 ವಿಮಾನ ನಿಲ್ದಾಣಗಳನ್ನು ಖಾಸಗೀಕರಣಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದ್ದು, ಈ ಸಂಬಂಧ ಸೋಮವಾರ ಹರಾಜು ಪ್ರಕ್ರಿಯೆ ನಡೆಯಿತು. ಈ ಹರಾಜು ಪ್ರಕ್ರಿಯೆಯಲ್ಲಿ ಅತಿ ಹೆಚ್ಚು ಬಿಡ್ ಮಾಡಿದ ಅದಾನಿ ಕಂಪನಿ ಮಂಗಳೂರು, ಅಹಮದಾಬಾದ್, ಜೈಪುರ, ತಿರುವನಂತಪುರಂ, ಲಖನೌ ವಿಮಾನ ನಿಲ್ದಾಣವನ್ನು ಪಡೆದುಕೊಂಡಿದೆ.
ಇನ್ನು ಗುವಾಹಟಿ ವಿಮಾನ ನಿಲ್ದಾಣ ಖಾಸಗೀಕರಣ ಗೊಳಿಸುವುದಕ್ಕೆ ಗುವಾಹಟಿ ನ್ಯಾಯಾಲಯದಿಂದ ತಡೆಯಾಜ್ಞೆ ತಂದ ಕಾರಣ ಅಲ್ಲಿನ ವಿಮಾನ ನಿಲ್ದಾಣದ ಹರಾಜು ಪ್ರಕ್ರಿಯೆ ಕೈಬಿಡಲಾಗಿತ್ತು.
50 ವರ್ಷಗಳ ಒಪ್ಪಂದ ಇದಾಗಿದ್ದು, ವಿಮಾನ ನಿಲ್ದಾಣಗಳ ನಿರ್ವಹಣೆ, ಟರ್ಮಿನಲ್​ಗಳ ಅಭಿವೃದ್ಧಿ ಮೊದಲಾದ ಜವಾಬ್ದಾರಿಗಳು ಇದರಲ್ಲಿವೆ. ಜಿಎಂಆರ್​ ಗ್ರೂಪ್​, ನ್ಯಾಷನಲ್​ ಇನ್ವೆಸ್ಟ್​ಮೆಂಟ್​ ಆ್ಯಂಡ್​ ಇನ್ಫ್ರಾಸ್ಟ್ರಕ್ಚರ್​ ಫಂಡ್​ ಸೇರಿ ಸಾಕಷ್ಟು ಸಂಸ್ಥೆಗಳು ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದವು.
ಅದಾನಿ ಕಂಪನಿಗೆ ಬೆಂಗಳೂರು ಮೂಲದ ಜಿಎಂಆರ್ ಗ್ರೂಪ್ ಪ್ರಬಲ ಪೈಪೋಟಿಯನ್ನು ನೀಡಿತ್ತು. ಆದರೆ ಅದಾನಿ ಕಂಪನಿ ಅತಿ ಹೆಚ್ಚು ಮೊತ್ತದ ಬಿಡ್ ಸಲ್ಲಿಸಿದ ಕಾರಣ 6ರ ಪೈಕಿ 5 ನಿಲ್ದಾಣವನ್ನು ತೆಕ್ಕೆಗೆ ಪಡೆಯುವಲ್ಲಿ ಯಶಸ್ವಿಯಾಗಿದೆ. 
ಮಾಸಿಕವಾಗಿ ಪ್ರಯಾಣಿಕನೊಬ್ಬನಿಗೆ ವಿಧಿಸುವ ಶುಲ್ಕದ ಮಾನದಂಡವನ್ನು ಪರಿಗಣಿಸಿ ಹರಾಜು ನಡೆದಿದೆ. ಈ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುವ ಕಂಪನಿಗಳಿಗೆ ಅನುಭವದ ಅಗತ್ಯ ಕಡ್ಡಾಯವಿರಲಿಲ್ಲ. ಹೀಗಾಗಿ ಹಲವು ಕಂಪನಿಗಳು ಬಿಡ್ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದವು.
SCROLL FOR NEXT