ವಾಣಿಜ್ಯ

ಕೇಂದ್ರ ಬಜೆಟ್ 2019: ಮೊದಲ ಬಜೆಟ್ ಮಂಡಿಸಲಿರುವ ಸಚಿವೆ ನಿರ್ಮಲಾ ಸೀತಾರಾಮನ್

Srinivasamurthy VN
ನವದೆಹಲಿ: ತೀವ್ರ ಕುತೂಹಲ ಕೆರಳಿಸಿರುವ ಎನ್ ಡಿಎ 2.0 ಸರ್ಕಾರದ ಮೊದಲ ಬಜೆಟ್ ಗೆ ಕ್ಷಣಗಣನೆ ಆರಂಭವಾಗಿದ್ದು, ಮೊದಲ ಬಜೆಟ್ ಮಂಡಿಸಲಿರುವ ಸಚಿವೆ ನಿರ್ಮಲಾ ಸೀತಾರಾಮನ್ ರ ಮೇಲೆ ನಿರೀಕ್ಷೆಗಳು ಗರಿಗೆದರಿವೆ.
ಸತತ ಎರಡನೇ ಅವಧಿಗೂ ಭರ್ಜರಿ ಬಹುಮತದೊಂದಿಗೆ ಸತತ ಎರಡನೇ ಬಾರಿ ಅಧಿಕಾರಕ್ಕೇರಿರುವ ಪ್ರಧಾನಿ ಮೋದಿ ನೇತೃತ್ವದ ಎನ್​ಡಿಎ 2.0 ಸರ್ಕಾರ ನಾಳೆ ಅಂದರೆ ಜುಲೈ 5ಕ್ಕೆ ತನ್ನ ಮೊದಲ ಬಜೆಟ್ ಮಂಡಿಸಲಿದೆ. ಇದೇ ಮೊದಲ ಬಾರಿಗೆ ವಿತ್ತ ಇಲಾಖೆಯ ಜವಾಬ್ದಾರಿ ಹೊತ್ತಿರುವ ನಿರ್ಮಲಾ ಸೀತಾರಾಮನ್ ಅವರು, ನಾಳೆ ಸಂಸತ್ ನಲ್ಲಿ ಬಜೆಟ್ ಮಂಡಿಸುತ್ತಿದ್ದು, ಭಾರತದ ಸಂಸತ್​ ಇತಿಹಾಸದಲ್ಲಿ ಹಣಕಾಸು ಖಾತೆ ಪಡೆದ, ಬಜೆಟ್​ ಮಂಡಿಸಿದ ಮೊದಲ ಮಹಿಳೆ ಎಂಬ ಕೀರ್ತಿಗೆ ಭಾಜನರಾಗಲಿದ್ದಾರೆ.
ಈ ಹಿಂದೆ ಮಾಜಿ ಪ್ರಧಾನಿ ದಿವಂಗತ ಇಂದಿರಾಗಾಂಧಿ ಅವರೂ ಕೂಡ ಬಜೆಟ್ ಮಂಡಿಸಿದ್ದರಾದರೂ, ಇಂದಿರಾ ಗಾಂಧಿ ಅವರ ಬಳಿಕ ದೇಶದ ಮೊದಲ ಮಹಿಳಾ ಹಣಕಾಸು ಸಚಿವೆಯಾದ ಗೌರವಕ್ಕೆ ಪಾತ್ರರಾಗಿರುವ ನಿರ್ಮಲಾ ಸೀತಾರಾಮನ್ ಅವರಿಗೂ ಇದು ಮೊದಲ ಬಜೆಟ್ ಆಗಿದೆ.
ಇನ್ನು ಚುನಾವಣೆಗೂ ಮುನ್ನ ಕಳೆದ ಫೆಬ್ರವರಿ 1ರಂದು ಅಂದಿನ ವಿತ್ತ ಸಚಿವ ಪಿಯೂಶ್ ಗೋಯೆಲ್ ಅವರು ಮಧ್ಯಂತರ ಬಜೆಟ್ ಮಂಡನೆ ಮಾಡಿದ್ದರು. ಅದರಲ್ಲಿ ಘೋಷಿಸಲಾಗಿದ್ದ ಬಹುತೇಕ ಅಂಶಗಳನ್ನ ಹಾಲಿ ಬಜೆಟ್ ನಲ್ಲಿ ನಿರ್ಮಲಾ ಸೀತಾರಾಮನ್ ಅವರು ಮುಂದುವರಿಸುವ ನಿರೀಕ್ಷೆ ಇದೆ. 
ಇನ್ನು ಬಜೆಟ್ ಮುನ್ನಾದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಸಂಪುಟ ಸಭೆ ನಡೆದಿದ್ದು, ಸಭೆಯಲ್ಲಿ ಪ್ರಧಾನಿ ರೈತ ಯೋಜನೆಯ ವ್ಯಾಪ್ತಿಯನ್ನು ಎಲ್ಲಾ ರೈತರಿಗೂ ವಿಸ್ತರಿಸಲು ನಿರ್ಧರಿಸಲಾಗಿದೆ. ಇದನ್ನೂ ಒಳಗೊಂಡಂತೆ ಒಂದಷ್ಟು ಹೊಸ ಯೋಜನೆಗಳನ್ನು ನೂತನ ಹಣಕಾಸು ಸಚಿವರು ಘೋಷಿಸುವ ಸಾಧ್ಯತೆ ಇದೆ.
SCROLL FOR NEXT