ಸಾನ್ ಫ್ರಾನ್ಸಿಸ್ಕೊ: ಗೂಗಲ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹುದ್ದೆ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ, ಜಗತ್ತಿನಲ್ಲೇ ಅತ್ಯಂತ ಗರಿಷ್ಠ ವೇತನ ಇರುವ ಹುದ್ದೆಗಳಲ್ಲಿ ಗೂಗಲ್ ಸಿಇಒ ಸ್ಥಾನವೂ ಒಂದು. ಐಟಿ ದಿಗ್ಗಜರು ಒಂದು ಬಾರಿ ಪ್ರಯತ್ನಿಸೋಣ ಎಂದು ಒಂದು ಕೈ ನೋಡೇ ಬಿಡಬಹುದು ಅಲ್ಲವೇ?
ಈಗಾಗಲೇ ಸುಂದರ್ ಪಿಚ್ಚೈಯವರು ಸಿಇಒ ಇದ್ದಾರಲ್ಲ, ಮತ್ಯಾಕೆ ಹೊಸಬರ ಆಯ್ಕೆ ಗೂಗಲ್ ತನ್ನ ಸಿಇಒವನ್ನು ಬದಲಾಯಿಸುವ ಉದ್ದೇಶ ಹೊಂದಿದೆಯೇ ಎಂದು ಹತ್ತಾರು ಸಂದೇಹಗಳು, ಪ್ರಶ್ನೆಗಳು ನಿಮ್ಮನ್ನು ಕಾಡಬಹುದು.
ಇದಕ್ಕೆಲ್ಲಾ ಕಾರಣ, ಲಿಂಕ್ಡ್ಇನ್ ಎಂಬ ಜನಪ್ರಿಯ ಸೋಷಿಯಲ್ ನೆಟ್‌ವರ್ಕಿಂಗ್ ಜಾಲತಾಣ. ಯಾರೋ ಒಬ್ಬರು ಗೂಗಲ್ ಸಿಇಒ ಹುದ್ದೆ ಖಾಲಿ ಇದೆ ಎಂದು ಹೇಳಿಕೊಂಡು ಪೋಸ್ಟ್ ಮಾಡಿದ್ದರು. ಜನರು ಅದನ್ನು ನಂಬಿ ಹಲವರು ಅರ್ಜಿಯನ್ನು ಗುಜರಾಯಿಸತೊಡಗಿದರು.
ಲಿಂಕ್ಡ್ ಇನ್ ನೆಟ್ ವರ್ಕಿಂಗ್ ಸೈಟ್ ನ ಸೆಕ್ಯುರಿಟಿ ಬಗ್‌ನಿಂದಾಗಿ ಸುಂದರ್ ಪಿಚ್ಚೈ ಗೂಗಲ್ ಸಿಇಒ ಹುದ್ದೆಯ ಪೋಸ್ಟಿಂಗ್ ಅಲ್ಲಿ ದಾಖಲಾಗಿತ್ತು. ಈ ತಾಂತ್ರಿಕ ದೋಷ (ಬಗ್) ಪ್ರಕಾರ, ಯಾವುದೇ ಕಂಪನಿಯ ಲಿಂಕ್ಡ್ಇನ್ ಪುಟದಲ್ಲಿ ಜನರು ಅಧಿಕೃತವೆಂಬಂತೆ ಕಾಣಿಸುವ ಉದ್ಯೋಗ ಮಾಹಿತಿಯನ್ನು ಪೋಸ್ಟ್ ಮಾಡಬಹುದಾಗಿದೆ. ಡಚ್ ನೇಮಕಾತಿ ಕಂಪನಿಯ ಮೈಕೆಲ್ ರಿಜಿಂಡರ್ಸ್ ಎಂಬವರು ಈ ತಾಂತ್ರಿಕ ದೋಷವನ್ನು ಪತ್ತೆ ಹಚ್ಚಿ ಅದನ್ನು ಲಿಂಕ್ಡ್ ಇನ್ ಸಂಸ್ಥೆಯ ಗಮನಕ್ಕೆ ತಂದರು.
ಮೂಲತಃ ಅರ್ಜಿಗಳನ್ನು ಲಿಂಕ್ಡ್ಇನ್‌ಗೆ ಕಳುಹಿಸಬೇಕಾಗುವಂತೆ ಆ್ಯಪ್‌ನಲ್ಲಿ ಅವಕಾಶವಿದೆಯಾದರೂ, ಅರ್ಜಿಗಳನ್ನು ಸ್ವೀಕರಿಸಲು ಜನರು ತಮಗೆ ಬೇಕಾದ ಲಿಂಕ್‌ಗಳನ್ನೂ ಅಲ್ಲಿ ಅಳವಡಿಸಬಹುದಾಗಿದೆ. ಇದೇ ರೀತಿಯಾಗಿ ಮೈಕೆಲ್ ಅವರು ಲಿಂಕ್ಡ್ಇನ್ ಕಂಪನಿಯ ಸಿಇಒ ಹುದ್ದೆಗೂ ನಕಲಿ ಉದ್ಯೋಗಾವಕಾಶದ ಪೋಸ್ಟ್ ಅನ್ನು ಮಾಡಿ ತೋರಿಸಿದ್ದಾರೆ. ಇಷ್ಟೇ ಅಲ್ಲದೆ, ಒಂದಿಷ್ಟು ಹಣ ನೀಡಿ (ಪಾವತಿ) ಅದನ್ನು ಹೆಚ್ಚು ಜನರಿಗೆ ತಲುಪಿಸುವಂತೆ ಪ್ರಚಾರವನ್ನು ಮಾಡುವ ಅವಕಾಶವೂ ಇದೆ ಎಂದು ತೋರಿಸಿಕೊಟ್ಟಿದ್ದಾರೆ.
ಲಿಂಕ್ಡ್ಇನ್ ಈ ತಾಂತ್ರಿಕ ದೋಷಕ್ಕೆ ಸ್ಪಂದಿಸಿ ಸರಿಪಡಿಸಿದ್ದು, ದೋಷ ಪತ್ತೆ ಮಾಡಿ ಸರಿಪಡಿಸಿಕೊಳ್ಳಲು ನೆರವಾಗಿದ್ದಕ್ಕಾಗಿ ಮೈಕೆಲ್‌ಗೆ ಧನ್ಯವಾದ ತಿಳಿಸಿದೆ ಮತ್ತು ಗೂಗಲ್ ಸಿಇಒ ಕುರಿತ ಉದ್ಯೋಗದ ಪೋಸ್ಟ್ ಅನ್ನು ಡಿಲೀಟ್ ಮಾಡಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos