ವಾಣಿಜ್ಯ

ವಿಡಿಯೋಕಾನ್ ಸಾಲ ಪ್ರಕರಣ: ಚಂದಾ ಕೊಚ್ಚಾರ್ ಗೆ ಇಡಿ ಸಮನ್ಸ್

Lingaraj Badiger
ನವದೆಹಲಿ: ನಿಯಮಾವಳಿಗಳನ್ನು ಉಲ್ಲಂಘಿಸಿ ವಿಡಿಯೋಕಾನ್ ಗೆ 1,875 ಕೋಟಿ ರೂಪಾಯಿ ಸಾಲ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಐಸಿಐಸಿಐ ಬ್ಯಾಂಕ್ ಮಾಜಿ ಸಿಇಒ ಚಂದಾ ಕೊಚ್ಚಾರ್ ಅವರಿಗೆ ಜಾರಿ ನಿರ್ದೇಶನಾಲಯ(ಇಡಿ) ಶುಕ್ರವಾರ ಸಮನ್ಸ್ ಜಾರಿ ಮಾಡಿದೆ.
ಪ್ರಕರಣದ ವಿಚಾರಣೆಗಾಗಿ ಜೂನ್ 10ರಂದು ಬೆಳಗ್ಗೆ 10.30ಕ್ಕೆ ಕೇಂದ್ರ ದೆಹಲಿಯ ಜಾಮನಗರದಲ್ಲಿರುವ ಇಡಿ ಕಚೇರಿಗೆ ಆಗಮಿಸುವಂತೆ ಚಂದಾ ಕೊಚ್ಚಾರ್ ಅವರಿಗೆ ಸಮನ್ಸ್ ನೀಡಲಾಗಿದೆ ಎಂದು ಇಡಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹಣಕಾಸು ಅಕ್ರಮಕ್ಕೆ ಸಂಬಂಧಸಿದಂತೆ ಜಾರಿ ನಿರ್ದೇಶನಾಲಯ ಕಳೆದು ತಿಂಗಳು ಐದು ಬಾರಿ ಚಂದಾ ಕೊಚ್ಚಾರ್ ಅವರನ್ನು ವಿಚಾರಣೆಗೆ ಒಳಪಡಿಸಿದ್ದು, ಇದೀಗ ಮತ್ತೆ ವಿಚಾರಣೆಗೆ ಮುಂದಾಗಿದೆ.
2009 ರಿಂದ 2011ರ ಅವಧಿಯಲ್ಲಿ ಚಂದಾ ಕೊಚ್ಚಾರ್ ಅಧಿಕಾರದಲ್ಲಿದ್ದಾಗ ಐಸಿಐಸಿಐ ಬ್ಯಾಂಕ್ ಮೂಲಕ ಅವ್ಯವಹಾರ ನಡೆದಿದೆ ಎಂದು ಕಳೆದ ಮಾರ್ಚ್ ನಲ್ಲಿ ಮೊದಲ ಬಾರಿಗೆ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಚಂದಾ ಕೊಚ್ಚರ್ ಕಳೆದ ಅಕ್ಟೋಬರ್‌ನಲ್ಲಿ ಸಿಇಒ ಹುದ್ದೆಯಿಂದ ಕೆಳಗಿಳಿದಿದ್ದರು.
ವಿಡಿಯೋಕಾನ್ ಸಂಸ್ಥೆಗೆ ನೀಡಲಾಗಿದ್ದ 3,250 ಕೋಟಿ ರೂ. ಸಾಲದ ಪ್ರಕ್ರಿಯೆಯಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿ ಬಂದಿದ್ದು, ಈ ಸಂಬಂಧ ಸಿಬಿಐ ಚಂದಾ ಕೊಚ್ಚಾರ್, ಪತಿ ದೀಪಕ್ ಕೊಚ್ಚಾರ್ ಹಾಗೂ ವಿಡಿಯೋಕಾನ್ ಚೇರ್ಮನ್ ವೇಣುಗೋಪಾಲ್ ಧೂತ್ ವಿರುದ್ಧ ಎಫ್ಐಆರ್ ದಾಖಲಿಸಿದೆ.
SCROLL FOR NEXT