ವಾಣಿಜ್ಯ

ಪಿಎನ್ ಬಿ ಹಗರಣಕ್ಕಿಂತ ಸ್ಟರ್ಲಿಂಗ್ ಬಯೊಟೆಕ್ ಹಗರಣ ಬಹಳ ದೊಡ್ಡದು: ಜಾರಿ ನಿರ್ದೇಶನಾಲಯ

Sumana Upadhyaya
ನವದೆಹಲಿ: ನೀರವ್ ಮೋದಿಯ ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣಕ್ಕಿಂತ ಸಂದೇಸರ ಬ್ರದರ್ಸ್ ಹಗರಣ ಬಹಳ ದೊಡ್ಡದು ಎಂದು ಜಾರಿ ನಿರ್ದೇಶನಾಲಯ ಹೇಳಿದೆ.
ಸ್ಟರ್ಲಿಂಗ್ ಬಯೊಟೆಕ್ ಲಿಮಿಟೆಡ್(ಎಸ್ ಬಿಎಲ್)/ಸಂದೇಸರ ಗ್ರೂಪ್ ಮತ್ತು ಅದರ ಮುಖ್ಯ ಪ್ರವರ್ತಕರಾದ ನಿತಿನ್ ಸಂದೇಸರ, ಚೇತನ್ ಸಂದೇಸರ ಮತ್ತು ದೀಪ್ತಿ ಸಂದೇಸರ ಭಾರತೀಯ ಬ್ಯಾಂಕುಗಳಿಗೆ ಸುಮಾರು 14,500 ಕೋಟಿ ರೂಪಾಯಿಗಳಷ್ಟು ವಂಚಿಸಿದ್ದಾರೆ.
ನೀರವ್ ಮೋದಿ ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ವಂಚನೆ ಮಾಡಿದ ಹಣದ ಮೊತ್ತ 11 ಸಾವಿರದ 400 ಕೋಟಿ ರೂಪಾಯಿಯಾಗಿದೆ ಎಂದು ಜಾರಿ ನಿರ್ದೇಶನಾಲಯ ಮೂಲಗಳು ಎಎನ್ಐ ಸುದ್ದಿಸಂಸ್ಥೆಗೆ ತಿಳಿಸಿವೆ.
ಬ್ಯಾಂಕಿಗೆ ಸುಮಾರು 5 ಸಾವಿರದ 383 ಕೋಟಿ ರೂಪಾಯಿ  ವಂಚಿಸಿದ ಆರೋಪಕ್ಕೆ ಸಂಬಂಧಪಟ್ಟಂತೆ ಕಳೆದ 2017ರ ಅಕ್ಟೋಬರ್ ನಲ್ಲಿ ಸಿಬಿಐ ಎಫ್ಐಆರ್ ದಾಖಲಿಸಿದ ನಂತರ ಜಾರಿ ನಿರ್ದೇಶನಾಲಯ ಕೇಸು ದಾಖಲಿಸಿದೆ.
ಸಂದೇಸರಾ ಗ್ರೂಪ್ ನ ಸಾಗರೋತ್ತರ ಕಂಪೆನಿಗಳು ಭಾರತೀಯ ಬ್ಯಾಂಕುಗಳ ವಿದೇಶಿ ಶಾಖೆಗಳಲ್ಲಿ ಸುಮಾರು 9 ಸಾವಿರ ಕೋಟಿ ರೂಪಾಯಿ ಸಾಲ ಪಡೆದುಕೊಂಡಿವೆ ಎಂದು ತನಿಖೆ ವೇಳೆ ಬಹಿರಂಗವಾಗಿತ್ತು. 
ಎಸ್ ಬಿಎಲ್ ಗ್ರೂಪ್ ಭಾರತೀಯ ಬ್ಯಾಂಕುಗಳಿಂದ ಭಾರತೀಯ ಮತ್ತು ವಿದೇಶಿ ಕರೆನ್ಸಿಗಳ ರೂಪದಲ್ಲಿ ಸಾಲ ಪಡೆದಿದ್ದವು. ಆಂಧ್ರ ಬ್ಯಾಂಕ್, ಯುಸಿಒ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಅಲಹಾಬಾದ್ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಇಂಡಿಯಾದಿಂದ ಸಾಲ ಮಂಜೂರಾಗಿತ್ತು.
SCROLL FOR NEXT