ವಾಣಿಜ್ಯ

ದೇಶ ಬಿಟ್ಟು ಹೋಗುತ್ತಿದ್ದ ಜೆಟ್ ಏರ್ ವೇಸ್ ಮಾಜಿ ಮುಖ್ಯಸ್ಥ ನರೇಶ್ ಗೋಯಲ್, ಪತ್ನಿಯನ್ನು ತಡೆದ ಅಧಿಕಾರಿಗಳು

Lingaraj Badiger
ಮುಂಬೈ: ತೀವ್ರ ಆರ್ಥಿಕ ಸಂಕಷ್ಟ ಹಾಗೂ ಸಾಲದಿಂದಾಗಿ ಹಾರಾಟ ಸ್ಥಗಿತಗೊಳಿಸಿರುವ ಜೆಟ್ ಏರ್ ವೇಸ್ ಮಾಜಿ ಮುಖ್ಯಸ್ಥ ನರೇಶ್ ಗೋಯಲ್ ಮತ್ತು ಅವರ ಪತ್ನಿ ಅನಿತಾ ಗೋಯಲ್ ಅವರ ವಿದೇಶ ಪ್ರವಾಸಕ್ಕೆ ಅನುಮತಿ ನೀಡಲು ವಲಸೆ ಪ್ರಾಧಿಕಾರಿದ ಅಧಿಕಾರಿಗಳು ನಿರಾಕರಿಸಿದ್ದಾರೆ.
ಇಂದು ದೇಶ ಬಿಟ್ಟು ಹೊರಡಲು ಅಣಿಯಾಗಿ ವಿಮಾನ ಏರಲು ಬಂದಿದ್ದ ನರೇಶ್ ಗೋಯಲ್ ಮತ್ತು ಅವರ ಪತ್ನಿ ಅನಿತಾ ಅವರನ್ನು ವಿಮಾನ ನಿಲ್ದಾಣ ಅಧಿಕಾರಿಗಳು ತಡೆದಿದ್ದಾರೆ. 
ನರೇಶ್ ಗೋಯಲ್ ಅವರು ತಮ್ಮ ಪತ್ನಿಯೊಂದಿಗೆ ಇಂದು ಮಧ್ಯಾಹ್ನ 3..35ಕ್ಕೆ ಎಮಿರೇಟ್ಸ್  ವಿಮಾನದ ಮೂಲಕ ದುಬೈಗೆ ತೆರಳಲು ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಆದರೆ ಅವರನ್ನು ವಿಮಾನ ನಿಲ್ದಾಣ ಅಧಿಕಾರಿಗಳು ತಡೆದಿದ್ದಾರೆ. ಜೆಟ್ ಏರ್‌ವೇಸ್ ಸಂಸ್ಥಾಪಕರಾದ ನರೇಶ್ ಗೋಯಲ್ ಅವರ ವಿರುದ್ಧ ಲುಕ್‌ಔಟ್ ನೋಟೀಸ್ ಜಾರಿಯಾಗಿದ್ದ ಕಾರಣ ಅವರನ್ನು ವಿದೇಶಕ್ಕೆ ಪ್ರಯಾಣಿಸದಂತೆ ತಡೆಯಲಾಗಿದೆ.
ಕಳೆದ ತಿಂಗಳು, ಜೆಟ್ ಏರ್ ವೇಸ್ ಅಧಿಕಾರಿಗಳು ಮತ್ತು ನೌಕರರ ಸಂಘದ ಅಧ್ಯಕ್ಷ ಕಿರಣ್ ಪಾವಸ್ಕರ್ ಅವರು ಮುಂಬೈ ಪೊಲೀಸರಿಗೆ ಪತ್ರ ಬರೆದು, ಸಿಬ್ಬಂದಿಗೆ ವೇತನ ನೀಡದ ಹಿನ್ನೆಲೆಯಲ್ಲಿ ಗೋಯಲ್ ಮತ್ತು ಜೆಟ್ ಏರ್ ವೇಸ್ ನಿರ್ದೇಶಕರ ಪಾಸ್ ಪೋರ್ಟ್ ಗಳನ್ನು ವಶಕ್ಕೆ ಪಡೆಯುವಂತೆ ಮನವಿ ಮಾಡಿದ್ದರು. ಹೀಗಾಗಿ ಗೋಯಲ್ ದಂಪತಿ ವಿದೇಶಕ್ಕೆ ತೆರಳದಂತೆ ತಡೆಯಲಾಗಿದೆ.
ಇತ್ತೀಚೆಗಷ್ಟೆ ನರೇಶ್ ಗೋಯಲ್ ಅವರು ಜೆಟ್ ಏರ್‌ವೇಸ್‌ ನ ನಿರ್ದೇಶಕ ಮಂಡಳಿಗೆ ರಾಜೀನಾಮೆ ನೀಡಿ ಹೊರಬಂದಿದ್ದರು. ಆದರೆ ಜೆಟ್‌ ಏರ್‌ವೇಸ್‌ ಮೇಲೆ ಭಾರಿ ಪ್ರಮಾಣದ ಸಾಲವಿದ್ದು, ಅದು ತನ್ನ ಸೇವೆಗಳನ್ನು ಸ್ಥಗಿತಗೊಳಿಸಿದೆ.
SCROLL FOR NEXT