ವಾಣಿಜ್ಯ

ನೋಟ್ ಬ್ಯಾನ್ ಗೆ ಮೂರು ವರ್ಷ, 2000 ರೂ. ನೋಟು ರದ್ದುಗೊಳಿಸಿ ಎಂದ ಮಾಜಿ ಹಣಕಾಸು ಕಾರ್ಯದರ್ಶಿ

Lingaraj Badiger

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ 500 ಹಾಗೂ 1000 ರೂಪಾಯಿ ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸಿ ಇಂದಿಗೆ ಮೂರು ವರ್ಷ. ಇದರ ಬೆನ್ನಲ್ಲೇ 2000 ರೂಪಾಯಿ ನೋಟುಗಳನ್ನು ರದ್ದುಗೊಳಿಸುವುದು ಉತ್ತಮ ಎಂದು ಮಾಜಿ ಹಣಕಾಸು ಕಾರ್ಯದರ್ಶಿ ಸುಭಾಷ್ ಚಂದ್ರ ಗರ್ಗ್ ಅವರು ಹೇಳಿದ್ದಾರೆ.

2000 ರೂಪಾಯಿಯ ಬಹುತೇಕ ನೋಟುಗಳು ಈಗ ಚಲಾವಣೆಯಲ್ಲಿಲ್ಲ.  2000 ರು. ಮುಖಬೆಲೆಯ ನೋಟುಗಳನ್ನು ಭಾರೀ ಪ್ರಮಾಣದಲ್ಲಿ ಕಾಳಧನಿಕರು ಗುಪ್ತವಾಗಿ ಕೂಡಿಟ್ಟಿರುವ ಶಂಕೆ ಇದೆ. ಹೀಗಾಗಿ ಈ ನೋಟುಗಳ ಅಪನಗದೀಕರಣ ಆಗಲೂಬಹುದು ಎಂದು ಗರ್ಗ್ ಸುಳಿವು ನೀಡಿದ್ದಾರೆ.

‘2000 ರು. ಮುಖಬೆಲೆಯ ನೋಟುಗಳು ದೇಶದಲ್ಲಿ ಚಲಾವಣೆಯಲ್ಲಿರುವ ಒಟ್ಟಾರೆ ಕರೆನ್ಸಿ ನೋಟುಗಳ ಪೈಕಿ ಶೇ.33 ರಷ್ಟು ಪಾಲು ಹೊಂದಿವೆ. ಆದರೆ ಈ ಪೈಕಿ ಸಾಕಷ್ಟು ನೋಟುಗಳು ಈಗ ಚಲಾವಣೆಯಲ್ಲೇ ಇಲ್ಲ. ಇವುಗಳನ್ನು ಅಕ್ರಮವಾಗಿ ಕಾಳಧನಿಕರು ದಾಸ್ತಾನು ಮಾಡಿಟ್ಟಿರುವ ಶಂಕೆ ಇದೆ’ ಎಂದಿದ್ದಾರೆ.

1,000 ಹಾಗೂ 500 ರೂ. ಮುಖಬೆಲೆಯ ನೋಟುಗಳನ್ನು ಕೇಂದ್ರ ಸರ್ಕಾರ ರದ್ದುಪಡಿಸಿ ನವೆಂಬರ್ 8ಕ್ಕೆ  ಮೂರು ವರ್ಷಗಳು ಪೂರ್ಣಗೊಂಡಿದೆ. ನೋಟು ರದ್ದತಿ ಬಳಿಕ 2,000 ರೂ. ಮುಖಬೆಲೆಯ ನೋಟುಗಳು ಚಲಾವಣೆಗೆ ಬಂದಿದ್ದವು.

SCROLL FOR NEXT