ವಾಣಿಜ್ಯ

ದೇಶದಲ್ಲಿ ಆರ್ಥಿಕ ಹಿಂಜರಿತ ಇಲ್ಲ: ರಾಜ್ಯಸಭೆಯಲ್ಲಿ ನಿರ್ಮಲಾ ಸೀತಾರಾಮನ್

Lingaraj Badiger

ನವದೆಹಲಿ: ದೇಶದಲ್ಲಿ ಆರ್ಥಿಕ ಬೆಳವಣಿಗೆ ನಿಧಾನವಾಗಿದೆ. ಆದರೆ ಆರ್ಥಿಕ ಹಿಂಜರಿತದ ಭಯ ಇಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬುಧವಾರ ರಾಜ್ಯಸಭೆಗೆ ತಿಳಿಸಿದ್ದಾರೆ.

ಇಂದು ರಾಜ್ಯಸಭೆಯಲ್ಲಿ ದೇಶದ ಆರ್ಥಿಕ ಪರಿಸ್ಥಿತಿಗೆ ಸಂಬಂಧಿಸಿದ ಚರ್ಚೆ ವೇಳೆ ಪ್ರತಿಪಕ್ಷಗಳ ಆರೋಪಗಳಿಗೆ ಪ್ರತಿಕ್ರಿಯಿಸಿದ ನಿರ್ಮಲಾ ಸೀತಾರಾಮನ್, ‘ದೇಶದಲ್ಲಿ ಆರ್ಥಿಕ ಹಿಂಜರಿತವಿಲ್ಲ, ಮುಂದೆಯೂ ಇರುವುದಿಲ್ಲ. ಬೇಕಿದ್ದರೆ ನಾವು ಕೈಗೊಂಡ ಪ್ರತಿಯೊಂದು ಕ್ರಮದ ಬಗ್ಗೆಯೂ ದಾಖಲೆ ಮುಂದಿಡುವೆ’ ಎಂದರು.

ಇದೇ ವೇಳೆ  ಎನ್‌ಡಿಎ ಅಧಿಕಾರಾವಧಿಯ ಹಣದುಬ್ಬರ ಹಾಗೂ ವಿದೇಶಿ ನೇರ ಹೂಡಿಕೆ(ಎಫ್‌ಡಿಐ) ಅಂಕಿ ಅಂಶಗಳನ್ನು ಯುಪಿಎ ಅವಧಿಯ ಅಂಕಿ ಅಂಶಗಳ ಜತೆ ತುಲನೆ ಮಾಡಿದರು.

2009-2014ರ ಅವಧಿಯಲ್ಲಿ 189.5 ಶತಕೋಟಿ ಡಾಲರ್ ಇದ್ದ ವಿದೇಶಿ ನೇರ ಹೂಡಿಕೆ 2019ರಲ್ಲಿ 283.9 ಶತಕೋಟಿ ಡಾಲರ್ ಆಗಿದೆ ಎಂದು ಸಚಿವೆ ವಿವರಿಸಿದರು.

ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕ ಅವಧಿಯ ಆರ್ಥಿಕ ವೃದ್ಧಿ ದರ ಪ್ರಮಾಣವನ್ನು ಸರ್ಕಾರ ಶುಕ್ರವಾರ ಬಿಡುಗಡೆ ಮಾಡಲಿದೆ.

2020ರ ಮಾರ್ಚ್‌ಗೆ ಕೊನೆಗೊಳ್ಳಲಿರುವ ಹಣಕಾಸು ವರ್ಷದ ಆರ್ಥಿಕ ಬೆಳವಣಿಗೆಯೂ ಕುಂಠಿತವಾಗಿರಲಿದೆ ಎಂದು ಅನೇಕ ಅರ್ಥಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ.

SCROLL FOR NEXT