ವಾಣಿಜ್ಯ

ಗಗನಕ್ಕೇರುತ್ತಿದೆ ತರಕಾರಿ ಬೆಲೆ: ಸಾಮಾನ್ಯ ಜನರ ಜೇಬಿಗೆ ಕತ್ತರಿ 

Sumana Upadhyaya

ನವದೆಹಲಿ: ಸಗಟು ಮಾರುಕಟ್ಟೆಯಲ್ಲಿ ನಿರಂತರವಾಗಿ ತರಕಾರಿ ಪೂರೈಕೆಯಿಂದ ಬೆಲೆಗಳು ಕಡಿಮೆಯಾಗಿರಬಹುದು ಆದರೆ ಚಿಲ್ಲರೆ ಮಾರುಕಟ್ಟೆಯಲ್ಲಿ ಮಾತ್ರ ತರಕಾರಿ ಬೆಲೆ ಇನ್ನೂ ಇಳಿಕೆಯಾಗಿಲ್ಲ. ಬೆಳ್ಳುಳ್ಳಿ ಬೆಲೆ ಹೆಚ್ಚಳ ಕೂಡ ಗೃಹಿಣಿಯರಿಗೆ ಅಡುಗೆ ಮಾಡುವುದು ಹೇಗೆ ಎಂಬ ತಲೆಬಿಸಿ ಹಿಡಿಸಿದೆ.


ಅಧಿಕೃತ ಅಂಕಿಅಂಶ ಪ್ರಕಾರ, ತರಕಾರಿಗಳ ಹಣದುಬ್ಬರ ದರ ಕಳೆದ ಸೆಪ್ಟೆಂಬರ್ ನಲ್ಲಿ ಶೇಕಡಾ 15ರಷ್ಟು ಹೆಚ್ಚಾಗಿದ್ದು ಚಿಲ್ಲರೆ ಅಂಗಡಿಗಳಲ್ಲಿ ದ್ವಿಗುಣವಾಗಿದೆ.


ಸರ್ಕಾರ ಈರುಳ್ಳಿ ಮತ್ತು ಟೊಮ್ಯೊಟೊ ದರ ನಿಯಂತ್ರಣ ಮಾಡಲು ಯತ್ನಿಸುತ್ತಿದ್ದರೂ ಕೂಡ ದೊಡ್ಡ ದೊಡ್ಡ ನಗರಗಳಲ್ಲಿ ಈರುಳ್ಳಿ ಕೆಜಿಗೆ 50 ರೂಪಾಯಿ ಮತ್ತು ಟೊಮ್ಯಾಟೊ ದರ ಕೆಜಿಗೆ 60ರಿಂದ 80 ರೂಪಾಯಿಗೆ ಹೆಚ್ಚಳವಾಗಿದೆ. ಬೆಳ್ಳುಳ್ಳಿ ಬೆಲೆ ಕೆಜಿಗೆ 250ರಿಂದ 300 ರೂಪಾಯಿಗೆ ಏರಿಕೆಯಾಗಿದೆ. ಆಲೂಗಡ್ಡೆ ದರ ಕೂಡ ಹೆಚ್ಚಳವಾಗುತ್ತಿದೆ.


ಎರಡು ತಿಂಗಳ ಹಿಂದೆ ನಾನು ಒಂದಷ್ಟು ದಿನಕ್ಕೆಂದು ಖರೀದಿಸುತ್ತಿದ್ದ ತರಕಾರಿಗಳ ಬೆಲೆ 500 ರೂಪಾಯಿಗಳಾಗಿದ್ದರೆ ಈಗ ಅದು ಸಾವಿರ ರೂಪಾಯಿಗೆ ಏರಿಕೆಯಾಗಿದೆ. ಅಡುಗೆಯ ಬಜೆಟ್ ಮೊತ್ತ ಬದಲಾಗಿದೆ ಎನ್ನುತ್ತಾರೆ ಗೃಹಿಣಿ ಸಾರಿಕಾ. ಹಸಿರು ತರಕಾರಿಗಳಾದ ಕ್ಯಾಬೇಜ್, ಸೂರೆಕಾಯಿಗಳ ದರ ಕೂಡ ಏರಿಕೆಯಾಗಿದೆ.


ಚಿಲ್ಲರೆ ಹಣದುಬ್ಬರ ಅಂಕಿಅಂಶ ಬಿಡುಗಡೆಯ ಪ್ರಕಾರ, ತರಕಾರಿಗಳ ಹಣದುಬ್ಬರ ದರ ಸೆಪ್ಟೆಂಬರ್ ನಲ್ಲಿ ಶೇಕಡಾ 15.40 ಆಗಿದ್ದರೆ ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಅದು ಶೇಕಡಾ 5.11ರಷ್ಟಾಗಿತ್ತು.


ರಾಜಧಾನಿ ಬೆಂಗಳೂರಿನಲ್ಲಿ ಬೆಳ್ಳುಳ್ಳಿಗೆ ಕೆಜಿಗೆ 78 ರೂಪಾಯಿ, ಆಲೂಗಡ್ಡೆ ಕೆಜಿಗೆ 22 ರೂಪಾಯಿ, ಈರುಳ್ಳಿ ಕೆಜಿಗೆ 56 ರೂಪಾಯಿ, ಟೊಮ್ಯಾಟೊಗೆ 24 ರೂಪಾಯಿ ಇದೆ. ಇನ್ನೊಂದು ವಾರದಲ್ಲಿ ದೀಪಾವಳಿ ಹಬ್ಬ, ಆ ಸಮಯದಲ್ಲಿ ತರಕಾರಿ ದರ ಮತ್ತಷ್ಟು ಹೆಚ್ಚುವ ಸಾಧ್ಯತೆಯಿದೆ.

SCROLL FOR NEXT