ವಾಣಿಜ್ಯ

ಸತತ 10ನೇ ತಿಂಗಳು ಪ್ರಯಾಣಿಕ ವಾಹನ ಮಾರಾಟದಲ್ಲಿ ಇಳಿಕೆ; ಆಗಸ್ಟ್ ನಲ್ಲಿ ಶೇ.31.57 ಕುಸಿತ

Sumana Upadhyaya

ನವದೆಹಲಿ: ಭಾರತದ ದೇಶೀಯ ಪ್ರಯಾಣಿಕರ ವಾಹನ ಮಾರಾಟದಲ್ಲಿ ಸತತ 10ನೇ ತಿಂಗಳು ಮತ್ತೆ ಇಳಿಕೆ ಕಂಡುಬಂದಿದೆ. ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ 2 ಲಕ್ಷದ 87 ಸಾವಿರದ 198 ವಾಹನಗಳು ಮಾರಾಟವಾಗಿದ್ದರೆ ಈ ವರ್ಷ ಆಗಸ್ಟ್ ನಲ್ಲಿ 1 ಲಕ್ಷದ 96 ಸಾವಿರದ 524 ವಾಹನಗಳು ಮಾರಾಟವಾಗಿವೆ. ಅಂದರೆ ವಾಹನಗಳ ಮಾರಾಟದಲ್ಲಿ ಶೇಕಡಾ 31.57ರಷ್ಟು ಇಳಿಕೆ ಕಂಡುಬಂದಿದೆ.


ದೇಶೀಯ ಕಾರು ಮಾರಾಟದಲ್ಲಿ ಶೇಕಡಾ 41.09ರಷ್ಟು ಇಳಿಕೆ ಕಂಡುಬಂದಿದ್ದು ಕಳೆದ ವರ್ಷ ಆಗಸ್ಟ್ ನಲ್ಲಿ 1 ಲಕ್ಷದ 96 ಸಾವಿರದ 847 ಕಾರುಗಳು ಮಾರಾಟವಾಗಿದ್ದರೆ ಈ ವರ್ಷ 1 ಲಕ್ಷದ 15 ಸಾವಿರದ 957 ಕಾರುಗಳು ಮಾರಾಟವಾಗಿವೆ. ಸೊಸೈಟಿ ಆಫ್ ಇಂಡಿಯನ್ ಆಟೊಮೊಬೈಲ್ ಮ್ಯಾನ್ಯುಫ್ಯಾಕ್ಚರರ್ಸ್ ಬಿಡುಗಡೆ ಮಾಡಿದ ಅಂಕಿಅಂಶದಿಂದ ಇದು ಗೊತ್ತಾಗಿದೆ.


ಮೊಟಾರ್ ಸೈಕಲ್ ಗಳ ಮಾರಾಟದಲ್ಲಿ ಕಳೆದ ತಿಂಗಳು ಶೇಕಡಾ 22.33ರಷ್ಟು ಇಳಿಕೆ ಕಂಡುಬಂದಿದ್ದು ಆಗಸ್ಟ್ ತಿಂಗಳಲ್ಲಿ 9 ಲಕ್ಷದ 37 ಸಾವಿರದ 486 ವಾಹನಗಳು ಮಾರಾಟವಾಗಿವೆ. ಕಳೆದ ವರ್ಷ ಆಗಸ್ಟ್ ನಲ್ಲಿ 12 ಲಕ್ಷದ 7 ಸಾವಿರದ 5 ಮೋಟಾರ್ ಸೈಕಲ್ ಗಳು ಮಾರಾಟವಾಗಿದ್ದವು.


ಆಗಸ್ಟ್ ನಲ್ಲಿ ದ್ವಿಚಕ್ರ ವಾಹನಗಳ ಒಟ್ಟು ಮಾರಾಟದಲ್ಲಿ ಶೇಕಡಾ 22.24ರಷ್ಟು ಇಳಿಕೆಯಾಗಿದ್ದು 15 ಲಕ್ಷದ 14 ಸಾವಿರದ 196 ವಾಹನಗಳು ಮಾರಾಟವಾಗಿವೆ. ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ 19 ಲಕ್ಷದ 47 ಸಾವಿರದ 304 ದ್ವಿಚಕ್ರ ವಾಹನಗಳು ಮಾರಾಟವಾಗಿದ್ದವು.


ವಾಣಿಜ್ಯ ವಾಹನಗಳ ಮಾರಾಟದಲ್ಲಿ ಕೂಡ ಶೇಕಡಾ 38.71ರಷ್ಟು ಇಳಿಕೆಯಾಗಿವೆ, ಒಟ್ಟು 51 ಸಾವಿರದ 897 ವಾಣಿಜ್ಯ ಬಳಕೆ ವಾಹನಗಳು ಮಾರಾಟವಾಗಿವೆ ಎಂದು ಅಂಕಿಅಂಶ ತಿಳಿಸಿದೆ.


ಹಲವು ವರ್ಗಗಳಲ್ಲಿ ದಾಖಲಾತಿಯಾದ ವಾಹನಗಳ ಮಾರಾಟದಲ್ಲಿ ಶೇಕಡಾ 23.55ರಷ್ಟು ಇಳಿಕೆಯಾಗಿದ್ದು ಈ ವರ್ಷ ಆಗಸ್ಟ್ ತಿಂಗಳಲ್ಲಿ 18 ಲಕ್ಷದ 21 ಸಾವಿರದ 490 ವಾಹನಗಳು ಮಾರಾಟವಾಗಿವೆ. ಕಳೆದ ವರ್ಷ ಆಗಸ್ಟ್ ನಲ್ಲಿ 23 ಲಕ್ಷದ 82 ಸಾವಿರದ 436 ವಾಹನಗಳು ಮಾರಾಟವಾಗಿದ್ದವು ಎಂದು ಅಂಕಿಸಂಖ್ಯೆ ತಿಳಿಸಿದೆ.

SCROLL FOR NEXT