ವಾಣಿಜ್ಯ

ಪೆಟ್ರೋಲ್, ಡೀಸೆಲ್ ಮೇಲೆ ಮತ್ತಷ್ಟು ತೆರಿಗೆ ಭಾರ ಸಾಧ್ಯತೆ

Srinivasamurthy VN

ನವದೆಹಲಿ: ಸೌದಿ ಅರೇಬಿಯಾದ ತೈಲಾಗಾರಗಳ ಮೇಲೆ ನಡೆದ ಡ್ರೋನ್ ದಾಳಿಯ ಪರಿಣಾಮವಾಗಿ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ದಿನೇ ದಿನೇ ಗಗನಕ್ಕೇರಿ ಜನಸಾಮಾನ್ಯರು ಇನ್ನಿಲ್ಲದ ಪಾಡುಪಡುತ್ತಿರುವಾಗಲೇ ಪೆಟ್ರೋಲ್, ಡೀಸೆಲ್ ಮೇಲೆ ಅಬಕಾರಿ ಸುಂಕ ಹಾಕಿ ಗಾಯದ ಮೇಲೆ ಬರೆ ಎಳೆಯಲು ಕೇಂದ್ರ ಸರ್ಕಾರ ಮುಂದಾಗಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಸ್ವಲ್ಪ ಸುಧಾರಣೆ ಕಂಡು ಬರುತ್ತಿರುವಂತೆಯೇ ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ತಲಾ ಎರಡು ರೂಪಾಯಿ ಅಬಕಾರಿ ಸುಂಕ ವಿಧಿಸಲು ಕೇಂದ್ರ ಸರ್ಕಾರ ಗಂಭೀರ ಚಿಂತನೆ ಮಾಡುತ್ತಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
  
ಈಗಾಗಲೇ ದೇಶದ ಹಲವು ನಗರಗಳಲ್ಲಿ ಲೀಟರ್ ಪೆಟ್ರೋಲ್ ಬೆಲೆ 75 ರೂ ದಾಟಿದೆ. ಡೀಸೆಲ್ ಸಹ 70 ರ ಗಡಿ ಮುಟ್ಟಿದೆ. ಮೊದಲೇ ಜನಸಾಮಾನ್ಯರು ಬೆಲೆ ಏರಿಕೆಯಿಂದ ತತ್ತರಿಸಿರುವಾಗ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಮತ್ತು ಮಾರಾಟ ತೆರಿಗೆ ಕಡಿಮೆ ಮಾಡಿ ಜನರ ಮೇಲಿನ ಹೊರೆ ಕಡಿಮೆ ಮಾಡುವ ಬದಲಿಗೆ ಕೇಂದ್ರ ಸರ್ಕಾರ ಜನರ ಮೇಲೆ ಗದಾ ಪ್ರಹಾರ ಮಾಡಲು ಹೊರಟಿದೆ ಎಂಬ ಅಸಮಾಧಾನ, ಆಕ್ರೋಶ ಸಾರ್ವಜನಿಕ ವಲಯದಲ್ಲಿ ಭುಗಿಲೆದ್ದಿದೆ.

SCROLL FOR NEXT