ವಾಣಿಜ್ಯ

ಜಗತ್ತೇ ಆರ್ಥಿಕ ಕುಸಿತದ ದವಡೆಗೆ ಸಿಲುಕಿದೆ, ಹೆಚ್ ಡಿಎಫ್ ಸಿಯ 1.75 ಕೋಟಿ ಷೇರು ಸದ್ದಿಲ್ಲದೇ ಚೀನಾ ಪಾಲಾಗಿದೆ! 

Srinivas Rao BV

ನವದೆಹಲಿ: ಚೀನಾ ಹರಡಿದ್ದ ಕೊರೋನಾ ವೈರಸ್ ನಿಂದ ಇಡೀ ಜಗತ್ತಿನ ಆರ್ಥಿಕತೆಯೇ ತತ್ತರಿಸಿ ಕುಸಿತದ ದವಡೆಗೆ ಸಿಲುಕಿದೆ, ಅದರೆ ಕೊರೋನಾ ವೈರಸ್ ನ ಜನ್ಮಸ್ಥಾನ ಚೀನಾ ಮಾತ್ರ ಯಾವುದೇ ಆತಂಕವಿಲ್ಲದೇ ಜಾಗತಿಕ ಮಟ್ಟದಲ್ಲಿ ಷೇರುಗಳನ್ನು ಖರೀದಿಸುತ್ತಿದೆ. 

ಪೀಪಲ್ಸ್ ಬ್ಯಾಂಕ್ ಆಫ್ ಚೀನಾ (ಪಿಬಿಒಸಿ) ಅತಿ ದೊಡ್ಡ ಗೃಹ ಸಾಲ ನೀಡುವ ಬ್ಯಾಂಕ್ ಆದ ಹೆಚ್ ಡಿಎಫ್ ಸಿ ಲಿಮಿಟೆಡ್ ನ ಬರೊಬ್ಬರಿ 1.75 ಕೋಟಿ ಷೇರುಗಳನ್ನು ಮಾರ್ಚ್ ತ್ರೈಮಾಸಿಕದಲ್ಲಿ ಖರೀದಿಸಿದೆ. 

1,74,92,909 ಷೇರುಗಳನ್ನು ಖರೀದಿಸುವ ಮೂಲಕ ಪಿಬಿಒಸಿ ಹೆಚ್ ಡಿಎಫ್ ಸಿಯ ಶೇ.1.01 ರಷ್ಟು ಷೇರುಗಳನ್ನು ಪಡೆದುಕೊಂಡಿದ್ದು, ಜನವರಿ-ಮಾರ್ಚ್ ತಿಂಗಳಲ್ಲಿ ಈ ವಹಿವಾಟು ನಡೆದಿರುವ ಸಾಧ್ಯತೆ ಇದೆ ಎಂದು ಮನಿ ಕಂಟ್ರೋಲ್ ವರದಿ ಮೂಲಕ ತಿಳಿದುಬಂದಿದೆ.

ಹೆಚ್.ಡಿ.ಎಫ್.ಸಿಯ ಷೇರುಗಳು ಇತ್ತೀಚಿನ ವಾರಗಳಲ್ಲಿ ಕುಸಿತ ಕಾಣುತ್ತಿದ್ದ ಸಂದರ್ಭದಲ್ಲೇ ಚೀನಾದ ಬ್ಯಾಂಕ್ ಷೇರುಗಳನ್ನು ಖರೀದಿಸಿರುವುದು ಮಹತ್ವ ಪಡೆದುಕೊಂಡಿದೆ. ಫೆಬ್ರವರಿ ಮೊದಲ ವಾರದಿಂದ ಹೆಚ್.ಡಿ.ಎಫ್.ಸಿಯ ಷೇರುಗಳು ಶೇ.41 ರಷ್ಟು ಕುಸಿತ ಕಂಡಿತ್ತು. ಜನವರಿ 14 ರಂದು ಶೇ.32 ರಷ್ಟು ಕುಸಿತ ಕಂಡು ಏ.10 ರಂದು ಷೇರುಗಳು ರೂಪಾಯಿ 1,701.95 ಕ್ಕೆ ಅಂತ್ಯಗೊಂಡಿತ್ತು.

ಇತ್ತ ಡಿಸೆಂಬರ್ ತ್ರೈಮಾಸಿಕದಲ್ಲಿ ಹೆಚ್.ಡಿಎಫ್ ಸಿ ಯಲ್ಲಿನ ತನ್ನ ಪಾಲನ್ನು ಎಲ್ ಐಸಿ ಶೇ.4.21 ರಷ್ಟಿಂದ ಶೇ.4.67ಕ್ಕೆ ಏರಿಕೆ ಮಾಡಿಕೊಂಡಿತ್ತು. ಈಗ ಚೀನಾದ ಬ್ಯಾಂಕ್ ಷೇರುಗಳನ್ನು ಖರೀದಿಸಿರುವ ಬಗ್ಗೆ ಮಾತನಾಡಿರುವ ಹೆಚ್ ಡಿಎಫ್ ಸಿ ಉಪಾಧ್ಯಕ್ಷ, ಸಿಇಒ ಕೆಕಿ ಮಿಸ್ತ್ರಿ ಪಿಬಿಒಸಿ ಹೆಚ್ ಡಿಎಫ್ ಸಿಯಲ್ಲಿ ಈ ಹಿಂದೆಯೇ ಶೇ.0.8 ರಷ್ಟು ಷೇರುಗಳನ್ನು ಹೊಂದಿತ್ತು. ಕಳೆದ ಒಂದು ವರ್ಷದಿಂದಲು ಚೀನಾ ಷೇರುಗಳನ್ನು ಖರೀದಿಸುತ್ತಿದ್ದು ಈಗ ಶೇ.1.1 ರಷ್ಟು ಷೇರುಗಳನ್ನು ಹೊಂದಿದೆ ಎಂದು ತಿಳಿಸಿದ್ದಾರೆ.

SCROLL FOR NEXT