ವಾಣಿಜ್ಯ

ಮ್ಯೂಚುವಲ್ ಫಂಡ್ ಗೆ 50 ಸಾವಿರ ಕೋಟಿ ರೂ. ಗಳ ವಿಶೇಷ ಲಿಕ್ವಿಡಿಟಿ ಸೌಲಭ್ಯ ಪ್ರಕಟಿಸಿದ ರಿಸರ್ವ್ ಬ್ಯಾಂಕ್

Sumana Upadhyaya

ನವದೆಹಲಿ: ಮ್ಯೂಚುವಲ್ ಫಂಡ್ ಹೂಡಿಕೆದಾರರಿಗೆ ಆತಂಕ ನಿವಾರಣೆಯಾಗುವ ನಿರ್ಧಾರ ಕೈಗೊಂಡಿರುವ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, 50 ಸಾವಿರ ಕೋಟಿ ರೂಪಾಯಿಗಳ ವಿಶೇಷ ಲಿಕ್ವಿಡಿಟಿ ಸೌಲಭ್ಯ (ಎಸ್ ಎಲ್ಎಫ್-ಎಂಎಫ್)ನ್ನು ಸೋಮವಾರ ಪ್ರಕಟಿಸಿದೆ.

ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಲಾಕ್ ಡೌನ್ ಹಿನ್ನೆಲೆಯಲ್ಲಿ ಹಣಕಾಸು ಮಾರುಕಟ್ಟೆಯಲ್ಲಿ ಉಂಟಾಗಿರುವ ತಲ್ಲಣವನ್ನು ಬಗೆಹರಿಸಲು ಮ್ಯೂಚುವಲ್ ಫಂಡ್ ಗಳ ಮೇಲಿನ ಲಿಕ್ವಿಡಿಟಿ ಒತ್ತಡವನ್ನು ಸುಗಮಗೊಳಿಸಲು ಆರ್ ಬಿಐ ಈ ಕ್ರಮ ಕೈಗೊಂಡಿದೆ.

ಆರ್ಥಿಕ ಮಾರುಕಟ್ಟೆ ಕುಸಿತದ ಈ ಸಮಯದಲ್ಲಿ ಹೆಚ್ಚು ಜಾಗರೂಕತೆಯಿಂದ ಆರ್ಥಿಕ ಸ್ಥಿರತೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು. ಮ್ಯೂಚುವಲ್ ಫಂಡ್ ಗಳ ಮೇಲಿನ ಲಿಕ್ವಿಡಿಟಿ ಒತ್ತಡವನ್ನು ಸುಲಭ ಮಾಡಲು 50 ಸಾವಿರ ಕೋಟಿ ರೂಪಾಯಿಗಳ ಮ್ಯೂಚುವಲ್ ಫಂಡ್ ಗಳ ವಿಶೇಷ ಲಿಕ್ವಿಡಿಟಿ ಸೌಲಭ್ಯವನ್ನು ಆರಂಭಿಸಲು ನಿರ್ಧರಿಸಲಾಗಿದೆ ಎಂದು ಆರ್ ಬಿಐ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಸೌಲಭ್ಯದಡಿ, ಆರ್ ಬಿಐ ನಿರ್ದಿಷ್ಟ ದರದಲ್ಲಿ 90 ದಿನಗಳ ರೆಪೊ ಕಾರ್ಯಚರಣೆ ನಡೆಸಬಹುದಾಗಿದೆ. ಈ ಹಣವನ್ನು ಪಡೆಯಲು ರಜಾದಿನಗಳನ್ನು ಹೊರತುಪಡಿಸಿ ಸೋಮವಾರದಿಂದ ಶುಕ್ರವಾರ ನಡುವೆ ಬ್ಯಾಂಕುಗಳು ತಮ್ಮ ಬಿಡ್ ಗಳನ್ನು ಸಲ್ಲಿಸಬಹುದು. ಇಂದಿನಿಂದ ಮೇ 11ರವರೆಗೆ ಅಥವಾ ಹಂಚಿಕೆಯಾದ ಹಣ ಬಳಕೆಯಾಗುವವರೆಗೆ ಯಾವುದು ಮೊದಲು ಅನ್ವಯವಾಗುತ್ತದೆಯೋ ಅಲ್ಲಿಯವರೆಗೆ ಈ ಸೌಲಭ್ಯ ಅನ್ವಯವಾಗಲಿದೆ.

SCROLL FOR NEXT