ವಾಣಿಜ್ಯ

ಎಂಎಸ್‌ಎಂಇಗಳಿಗೆ ವೇತನ ಸುರಕ್ಷತಾ ನೆರವು ಒದಗಿಸುವಂತೆ ಕೇಂದ್ರಕ್ಕೆ ಚಿದಂಬರಂ ಒತ್ತಾಯ

Srinivas Rao BV

ನವದೆಹಲಿ: ಲಾಕ್ ಡೌನ್ ಹಿನ್ನೆಲೆಯಲ್ಲಿ ದೇಶದ ಶ್ರಮಿಕ ವರ್ಗದಲ್ಲಿ ನಿಜವಾಗಿಯೂ ಆತಂಕವಿದೆ ಇದೆ ಎಂದು ಪ್ರತಿಪಾದಿಸಿರುವ ಮಾಜಿ ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ, ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಉದ್ಯಮ (ಎಂಎಸ್ಎಂಇ) ವಲಯಕ್ಕೆ ವೇತನ ಸುರಕ್ಷತಾ ನೆರವು ಮತ್ತು ಸಾಲ ಖಾತರಿ ನಿಧಿಗಾಗಿ ತಲಾ 1 ಲಕ್ಷ ಕೋಟಿ ರೂ.ಗಳ ಎರಡು ಹಣಕಾಸು ಪ್ಯಾಕೇಜ್‌ಗಳನ್ನು ಒದಗಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಏಪ್ರಿಲ್ 30 ಅಂದರೆ ನಾಳೆ ತಿಂಗಳ ಕೊನೆಯ ಕೆಲಸದ ದಿನ. ಭಾರತದ 12 ಕೋಟಿಗೂ ಹೆಚ್ಚು ಜನರು ಉಸಿರು ಬಿಗಿ ಹಿಡಿದು ಕಾಯುತ್ತಿದ್ದಾರೆ. ಏಪ್ರಿಲ್ ತಿಂಗಳ ವೇತನ, ಸಂಬಳ ಬರುತ್ತದೆಯೇ ಎಂಬ ಆತಂಕದಲ್ಲಿದ್ದಾರೆ ಎಂದು ಚಿದಂಬರಂ ಬುಧವಾರ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. 

ಎಂಎಸ್‌ಎಂಇಗಳಿಗೆ ಏಪ್ರಿಲ್ ತಿಂಗಳಿಗೆ ವೇತನಗಳು ಮತ್ತು ಸಂಬಳವನ್ನು ಪಾವತಿಸಲು ಕೇಂದ್ರ ಸರ್ಕಾರ ಒಂದು ಲಕ್ಷ ಕೋಟಿ ರೂ. ವೇತನ ಸುರಕ್ಷತಾ ನೆರವು ನೀಡಬೇಕು ಮತ್ತು ಎಂಎಸ್‌ಎಂಇಗಳಿಗೆ 1 ಲಕ್ಷ ಕೋಟಿ ರೂ.ಗಳ ಸಾಲ ಖಾತರಿ ನಿಧಿ ಒದಗಿಸಬೇಕು. ಇದು ಎಂಎಸ್‍ಎಂಇಗಳು ಬ್ಯಾಂಕ್‍ಗಳಿಗೆ ಹೋಗಿ ಸಾಲ ಪಡೆಯಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದ್ದಾರೆ.

ಎಂಎಸ್‌ಎಂಇ ಸಚಿವಾಲಯದ ವಾರ್ಷಿಕ ವರದಿಯನ್ನು ಉಲ್ಲೇಖಿಸಿದ ಸಚಿವರು 11 ಕೋಟಿ ಜನರು 6.3 ಕೋಟಿ ಎಂಎಸ್‌ಎಂಇಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಲಾಕ್‍ಡೌನ್‍ನಿಂದ ಇವರಲ್ಲಿ ಅನೇಕರು ಏಪ್ರಿಲ್ ತಿಂಗಳಲ್ಲಿ ಒಂದೇ ದಿನವೂ ಕೆಲಸ ಮಾಡಿಲ್ಲ. ಇವರೆಲ್ಲ ಆದಾಯವಿಲ್ಲದೆ ಕುಟುಂಬವನ್ನು ಹೇಗೆ ಪೋಷಿಸುತ್ತಾರೆ? ಅನೇಕ ಉದ್ಯಮಗಳು ವೇತನ ಮತ್ತು ಸಂಬಳವನ್ನು ನೀಡಲು ಸಾಧ್ಯವಾಗುತ್ತಿಲ್ಲದ ಕಾರಣ ಈ 11 ಕೋಟಿ ಜನರ ಜೀವನೋಪಾಯ ಸದ್ಯ ಅಪಾಯದಲ್ಲಿದೆ ಎಂದು ಚಿದಂಬರಂ ಹೇಳಿದ್ದಾರೆ.

SCROLL FOR NEXT