ವಾಣಿಜ್ಯ

ಕೊವಿಡ್ 'ದೇವರ ಆಟ', ಜಿಎಸ್‌ಟಿ ಸಂಗ್ರಹ ಕುಸಿತಕ್ಕೆ ಕೊರೋನಾ ಕಾರಣ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

Srinivasamurthy VN

ನವದೆಹಲಿ: ಕೊವಿಡ್-19 ಸಾಂಕ್ರಾಮಿಕ ದೇವರ ಆಟ...  ದೇಶದಲ್ಲಿ ಜಿಎಸ್‌ಟಿ ಸಂಗ್ರಹ ಕುಸಿತಕ್ಕೆ ಕೊರೋನಾ ಲಾಕ್ ಡೌನ್ ಕಾರಣ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ದೆಹಲಿಯಲ್ಲಿ ನಡೆದ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯಗಳು ಜಿಎಸ್‌ಟಿ ಪರಿಹಾರ ನೀಡುವಂತೆ ಕೇಂದ್ರದ ಮೇಲೆ ಒತ್ತಡ ಹಾಕಿವೆ. ಆದರೆ ಕೊರೊನಾದಿಂದ ಜಿಎಸ್‌ಟಿ ಸಂಗ್ರಹ ದೊಡ್ಡ ಮಟ್ಟಕ್ಕೆ ಕುಸಿದಿರುವುದರಿಂದ ಆರ್‌ಬಿಐನಿಂದ ಸಾಲ ಪಡೆದು ಪರಿಹಾರ ಹಣ ನೀಡುವ ಬಗ್ಗೆ ಪರಿಶೀಲನೆ ನಡೆಸುತ್ತೇವೆ. ಕೊರೊನಾ ಬಿಕ್ಕಟ್ಟಿನಿಂದ ಜಿಎಸ್‌ಟಿ ಸಂಗ್ರಹದಲ್ಲಿ ಭಾರಿ ಕುಸಿತವಾಗಿದ್ದು, 2021ನೇ ಆರ್ಥಿಕ ವರ್ಷದಲ್ಲಿ 2.35 ಲಕ್ಷ ಕೋಟಿ ರೂ. ಕೊರತೆಯಾಗಲಿದೆ.ಕೊರೊನಾ ಬಿಕ್ಕಟ್ಟು ಭಗವಂತನ ಆಟ, ಇದು ಜಿಎಸ್‌ಟಿ ಸಂಗ್ರಹದ ಮೇಲೆ ಅನಿರೀಕ್ಷಿತ ಪರಿಣಾಮ ಬೀರಿದೆ. ಈ ವರ್ಷ ನಾವು ಅಸಾಧಾರಣ ಪರಿಸ್ಥಿತಿಯನ್ನು ಎದುರಿಸುತ್ತಿದ್ದೇವೆ. ನಾವು ಭಗವಂತನ ಆಟವನ್ನು ಎದುರಿಸುತ್ತಿದ್ದೇವೆ. ನಾವು ಆರ್ಥಿಕ ಹಿಂಜರಿತವನ್ನೂ ಕಾಣಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಮಾರ್ಚ್‌ನಲ್ಲಿ ನೀಡಿದ 13,806 ಕೋಟಿ ರೂಪಾಯಿ ಸೇರಿ 2020ರಲ್ಲಿ ಕೇಂದ್ರ ಸರ್ಕಾರ ಜಿಎಸ್‌ಟಿ ಪರಿಹಾರವಾಗಿ 1.65 ಲಕ್ಷ ಕೋಟಿ ರೂಪಾಯಿಯನ್ನು ರಾಜ್ಯಗಳಿಗೆ ನೀಡಿದೆ. ಆದರೆ ಇದೇ ಅವಧಿಯಲ್ಲಿ ಸಂಗ್ರಹಿಸಿದ ಸೆಸ್‌ ಮೊತ್ತ 95,444 ಕೋಟಿ ರೂಪಾಯಿ ಮಾತ್ರ.

ಜಿಎಸ್‌ಟಿ ಪರಿಹಾರ ವಿತರಣೆ ಪ್ರಶ್ನಿಸುತ್ತಿರುವವರು ಆತ್ಮಾವಲೋಕನ ಮಾಡಿಕೊಳ್ಳಬೇಕು
ಕಾಂಗ್ರೆಸ್‌ ಮತ್ತು ಅದರ ಮಿತ್ರ ಪಕ್ಷಗಳ ಆಡಳಿತವಿರುವ ರಾಜ್ಯಗಳಿಗೆ ಜಿಎಸ್‌ಟಿ ಪರಿಹಾರ ವಿತರಿಸಲ್ಲ ಎಂಬ ಆರೋಪಗಳಿಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ಜಿಎಸ್‌ಟಿ ಜಾರಿಗೊಳಿಸಲಾಗದವರು ಮೌಲ್ಯಮಾಪನ ಮಾಡಿಕೊಳ್ಳಬೇಕು ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

SCROLL FOR NEXT