ವಾಣಿಜ್ಯ

ಆರ್ಥಿಕ ಪರಿಸ್ಥಿತಿಯ ಕಾರಣ ವೆಚ್ಚಗಳಿಗೆ ಮಿತಿ ಹಾಕಲು ಮುಂದಾದ ಹಣಕಾಸು ಸಚಿವಾಲಯ 

Srinivas Rao BV

ನವದೆಹಲಿ: ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಹಣಕಾಸು ಸಚಿವಾಲಯ ವೆಚ್ಚಗಳಿಗೆ ಕಡಿವಾಣ ಹಾಕುವ ನಿರ್ಧಾರವನ್ನು ಪ್ರಕಟಿಸಿದೆ.

ಹಾಲಿ ಹಣಕಾಸು ವರ್ಷದ ಕೊನೆಯ ತ್ರೈಮಾಸಿಕದಲ್ಲಿ ಸಾಧ್ಯವಾದಷ್ಟೂ ವೆಚ್ಚಗಳಿಗೆ ಕಡಿವಾಣ ಹಾಕಲು ಸರ್ಕಾರದ ಎಲ್ಲಾ ಇಲಾಖೆಗಳು ಹಾಗೂ ಸಚಿವಾಲಯಗಳಿಗೆ ಹಣಕಾಸು ಸಚಿವಾಲಯ ನಿರ್ದೇಶನ ರವಾನಿಸಿದ್ದು, ನಿಗದಿತ ಬಜೆಟ್ ಅಂದಾಜನ್ನು ಮೀರದೇ ನಿಯಂತ್ರಣ ವಿಧಿಸಿಕೊಳ್ಳಲು ಸೂಚನೆ ನೀಡಿದೆ. 

ಪರಿಷ್ಕೃತ ಮಾನದಂಡದ ಪ್ರಕಾರ ಈಗಿರುವ ಬಜೆಟ್ ಅಂದಾಜಿಗಿಂತ ವೆಚ್ಚಗಳನ್ನು ಶೇ.3-8 ಕಡಿತಗೊಳಿಸುವುದು ಸಚಿವಾಲಯದ ಉದ್ದೇಶ. 2019-20 ರ ಕೊನೆಯ ತ್ರೈಮಾಸಿಕದಲ್ಲಿ ವೆಚ್ಚಗಳನ್ನು ಬಜೆಟ್ ಎಸ್ಟಿಮೇಟ್ (ಬಿಇ) ನ ಶೇ.25ರಷ್ಟಕ್ಕೆ ನಿಯಂತ್ರಿಸಿಕೊಳ್ಳಬೇಕು. ಕೊನೆಯ ತಿಂಗಳಾದ ಮಾರ್ಚ್ ನಲ್ಲಿ ನ ಶೇ.10 ನ್ನು ಮೀರಬಾರದು, ಒಂದು ವೇಳೆ ಪರಿಷ್ಕೃತ ಅಂದಾಜು ಹಂತದಲ್ಲಿ ಹೆಚ್ಚುವರಿ ವೆಚ್ಚ ಎದುರಾದರೂ ಅವುಗಳನ್ನು ಸಂಸತ್ ನ ಅನುಮೋದನೆ ಬಳಿಕವೇ ಪಡೆದುಕೊಳ್ಳತಕ್ಕದ್ದು ಎಂಬ ನಿರ್ದೇಶನವನ್ನು ಹಣಕಾಸು ಸಚಿವಾಲಯ ನೀಡಿದೆ. ಅಷ್ಟೇ ಅಲ್ಲದೇ ಯಾವುದೇ ಸಚಿವಾಲಯ ಈ ಹಿಂದಿನ ತ್ರೈಮಾಸಿಕದಲ್ಲಿ ತನಗೆ ನೀಡಲಾಗಿದ್ದ ಹಣವನ್ನು ಬಳಕೆ ಮಾಡದೇ ಹಾಗೆಯೇ ಉಳಿಸಿಕೊಂಡಿದ್ದರೆ ಅದನ್ನು ಈ ತ್ರೈಮಾಸಿಕದ್ಲಲಿ ಬಳಕೆ ಮಾಡಿಕೊಳ್ಳದಂತೆಯೂ (carry forward) ನಿರ್ಬಂಧ ವಿಧಿಸಲಾಗಿದೆ. 

ಈ ಹಿಂದಿನ ಮಾರ್ಗಸೂಚಿಗಳ ಪ್ರಕಾರ ನಗದು ನಿರ್ವಹಣೆಯ ಮಿತಿ ಬಜೆಟ್ ಅಂದಾಜಿನ ಶೇ.33 ರಷ್ಟಿತ್ತು. ಆದರೆ ಪರಿಷ್ಕೃತ ಮಾರ್ಗಸೂಚಿಗಳ ಪ್ರಕಾರ  4ನೇ ತ್ರೈಮಾಸಿಕಕ್ಕೆ ಅದನ್ನು ಶೇ.25 ಕ್ಕೆ ಇಳಿಕೆ ಮಾಡಲಾಗಿದೆ. ಇನ್ನು ಆರ್ಥಿಕ ವರ್ಷದ ಕೊನೆಯ ತಿಂಗಳಿನ ವೆಚ್ಚದ ಮಿತಿಯನ್ನು ಶೇ.15 ರಿಂದ ಶೇ.10ಕ್ಕೆ ಇಳಿಕೆ ಮಾಡಲಾಗಿದೆ. ಇನ್ನು ಜನವರಿ ಫೆಬ್ರವರಿ (Balance period) ಯದ್ದು ಹಿಂದಿನ ಶೇ. 18 ರಷ್ಟನ್ನು ಬದಲಾವಣೆ ಮಾಡಿ ಶೇ.15 ಕ್ಕೆ ಇಳಿಕೆ ಮಾಡಲಾಗಿದೆ. 

ದೊಡ್ಡ ಮೊತ್ತದ ಖರ್ಚುಗಳು 2017 ರ ಆಗಸ್ಟ್ ಖರ್ಚು ನಿಯಂತ್ರಣ ಮಾರ್ಗಸೂಚಿಗಳ ಪ್ರಕಾರ ನಿರ್ವಹಣೆಯಾಗಲಿವೆ. ಈ ಮಾರ್ಗ ಸೂಚಿಯ ಪ್ರಕಾರ 5,000 ಕೋಟಿಗಿಂತಲೂ ಹೆಚ್ಚಿನ ಖರ್ಚು-ವೆಚ್ಚಗಳಿಗೆ ಪೂರ್ವಾನುಮತಿ ಪಡೆಯಬೇಕಾಗುತ್ತದೆ. 

ಈ ರೀತಿ ಮಾಡುವುದರಿಂದ ನಗದು ವಹಿವಾಟಿನಲ್ಲಿ ಉಂಟಾಗುವ ಗೊಂದಲ ತತ್ಪರಿಣಾಮವಾಗಿ ಸರ್ಕಾರದ ಪಡೆಯಬಹುದಾದ ತಾತ್ಕಾಲಿಕ ಸಾಲಕ್ಕೆ ಬಡ್ಡಿ ಉಳಿತಾಯ ಮಾಡಲು ಸಾಧ್ಯವಾಗಲಿದೆ. ಅಷ್ಟೇ ಅಲ್ಲದೇ ಹೆಚ್ಚಿನ ಪ್ರಮಾಣ ನಗದು ಹರಿವಿನಿಂದ ಆರ್ಥಿಕತೆಯಲ್ಲಿ ಉಂಟಾಗಬಹುದಾದ ಲಿಕ್ವಿಡಿಟಿ ಕ್ರಂಚ್ ನ್ನು ತಪ್ಪಿಸುವುದೂ ಸಾಧ್ಯವಾಗಲಿದೆ. 

SCROLL FOR NEXT