ವಾಣಿಜ್ಯ

ಭಾರತದಲ್ಲಿ ಚೀನಾ ಕಂಪೆನಿ ಸ್ಮಾರ್ಟ್ ಫೋನ್ ಗಳ ಮಾರಾಟ ಶೇ.9ರಷ್ಟು ಕುಸಿತ: ಸ್ಯಾಮ್ ಸಂಗ್ ಗೆ ವರ!

Sumana Upadhyaya

ನವದೆಹಲಿ: ಚೀನಾದ ಹಲವು ಉತ್ಪನ್ನಗಳು, ಆಪ್ ಗಳನ್ನು ನಿಷೇಧಿಸಿದ ನಂತರ ಭಾರತದ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಕಳೆದ ಮೂರು ತಿಂಗಳಲ್ಲಿ ಶೇಕಡಾ 9ರಷ್ಟು ಕುಸಿತವಾಗಿದೆ.

ಈ ಬಗ್ಗೆ ನಿನ್ನೆ ಕೌಂಟರ್ ಪಾಯಿಂಟ್ ರಿಸರ್ಚ್ ರಿಪೋರ್ಟ್ ಬಿಡುಗಡೆ ಮಾಡಿರುವ ವರದಿಯಲ್ಲಿ ಭಾರತದಲ್ಲಿ ಚೀನಾ ದೇಶದ ಸ್ಮಾರ್ಟ್ ಫೋನ್ ಗಳ ಮಾರಾಟದಲ್ಲಿ ಏಪ್ರಿಲ್ ನಿಂದ ಜೂನ್ ಮಧ್ಯೆ ತ್ರೈಮಾಸಿಕದಲ್ಲಿ ಶೇಕಡಾ 72ಕ್ಕೆ ಕುಸಿತ ಕಂಡುಬಂದಿದ್ದು, ಮಾರ್ಚ್ ವರೆಗೆ ಇದರ ವ್ಯಾಪಾರ ಶೇಕಡಾ 81ರಷ್ಟಿತ್ತು.

ಒಪ್ಪೊ, ವಿವೊ, ರಿಯಲ್ಮೆ ಸ್ಮಾರ್ಟ್ ಫೋನ್ ಗಳ ವಹಿವಾಟು ಕಳೆದ ತ್ರೈಮಾಸಿಕದಲ್ಲಿ ಭಾರೀ ಕುಸಿತವಾಗಿದ್ದು ಕೊರಿಯಾ ಮೂಲದ ಸ್ಯಾಮ್ ಸಂಗ್ ಸ್ಮಾರ್ಟ್ ಫೋನ್ ಗೆ ಭಾರತದಲ್ಲಿ ಬೇಡಿಕೆ ಹೆಚ್ಚಾಗಿದೆ. ಅದರ ವಹಿವಾಟು ಶೇಕಡಾ 16ರಿಂದ ಶೇಕಡಾ 26ಕ್ಕೆ ಏರಿಕೆಯಾಗಿದೆ.

ಕೌಂಟರ್ ಪಾಯಿಂಟ್ ರಿಸರ್ಚ್ ನ ಸಂಶೋಧನಾ ವಿಶ್ಲೇಷಕಿ ಶಿಲ್ಪಿ ಜೈನ್, ಚೀನಾ ದೇಶದಿಂದ ಸ್ಮಾರ್ಟ್ ಫೋನ್ ಗಳ ಪೂರೈಕೆ ಕಡಿಮೆಯಾಗಿರುವುದು ಮತ್ತು ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸಬೇಕೆಂಬ ಮನೋಭಾವ ಭಾರತೀಯರಲ್ಲಿ ಹೆಚ್ಚಾಗುತ್ತಿರುವುದೇ ಇದಕ್ಕೆ ಕಾರಣವಾಗಿದೆ ಎನ್ನುತ್ತಾರೆ. ಜೂನ್ ನಲ್ಲಿ ನಡೆದ ಭಾರತ-ಚೀನಾ ಗಡಿ ಸಂಘರ್ಷವೇ ಇದಕ್ಕೆ ಮುಖ್ಯ ಕಾರಣ ಎನ್ನುತ್ತಾರೆ.

ಭಾರತದಲ್ಲಿ ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೊ ಗೂಗಲ್ ಜೊತೆ ಸೇರಿಕೊಂಡು ಸ್ಮಾರ್ಟ್ ಫೋನ್ ಮಾರುಕಟ್ಟೆಗೆ ಇಳಿಯುತ್ತಿದ್ದು ಚೀನಾದ ಸ್ಮಾರ್ಟ್ ಫೋನ್ ಕಂಪೆನಿಗಳಿಗೆ ಹೊಡೆತ ಬೀಳಲಿದೆ. ರಿಲಯನ್ಸ್ ಜಿಯೊ ಮತ್ತು ಗೂಗಲ್ ಜೊತೆಯಾಗಿ 4ಜಿ ಅಥವಾ 5ಜಿ ಅಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಳನ್ನು ಭಾರತದಲ್ಲಿ ಜನರಿಗೆ ಕೈಗೆಟಕುವ ದರದಲ್ಲಿ ಪೂರೈಸಲು ಮುಂದಾಗುತ್ತಿದೆ.
ಸ್ಥಳೀಯ ಸ್ಮಾರ್ಟ್ ಫೋನ್ ಬ್ರಾಂಡ್ ಗಳಾದ ಮೈಕ್ರೊಮ್ಯಾಕ್ಸ್, ಲಾವಾ ಕೂಡ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಜನಪ್ರಿಯವಾಗುತ್ತಿದೆ.

ಆದರೆ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಕೈಗೆಟಕುವ ದರದಲ್ಲಿ ಸದ್ಯ ಸ್ಮಾರ್ಟ್ ಫೋನ್ ಗಳು ಅಷ್ಟೊಂದು ಜನಪ್ರಿಯವಾಗಿಲ್ಲದಿರುವುದರಿಂದ ಚೀನಾದ ಕ್ಸಿಯೊಮಿ  ಮತ್ತು ಒನ್ ಪ್ಲಸ್ ಭಾರತದ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಇನ್ನೂ ಬೇಡಿಕೆ ಉಳಿಸಿಕೊಂಡಿವೆ.

ಕೋವಿಡ್-19 ಲಾಕ್ ಡೌನ್ ಹೇರಿಕೆಯಿಂದಾಗಿ ಭಾರತದ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ವಹಿವಾಟು ಶೇಕಡಾ 51ರಷ್ಟು ಕುಸಿತ ಕಂಡಿದೆ ಎಂದು ಸಹ ವರದಿ ಹೇಳುತ್ತದೆ.

SCROLL FOR NEXT