ವಾಣಿಜ್ಯ

ಲಾಕ್ ಡೌನ್ ನಷ್ಟದ ನಡುವೆಯೂ ಪಂಜಾಬ್ ನ್ಯಾಷನಲ್ ಬ್ಯಾಂಕ್ ಉನ್ನತ ಅಧಿಕಾರಿಗಳಿಗೆ ದುಬಾರಿ ಆಡಿ ಕಾರು!

Srinivasamurthy VN

ಮುಂಬೈ: ಇಡೀ ದೇಶ ಕೊರೋನಾ ವೈರಸ್ ಸಾಂಕ್ರಾಮಿಕ ಲಾಕ್ಡೌನ್ ನಿಂದಾಗಿ ಆರ್ಥಿಕ ಕುಸಿತದಿಂದ ಭಾರಿ ನಷ್ಟ ಅನುಭವಿಸುತ್ತಿರುವ ನಡುವೆಯೇ ನೀರವ್ ಮೋದಿ ವಂಚನೆ ಪ್ರಕರಣದ ಮೂಲಕ ಭಾರಿ ಸುದ್ದಿಗೆ ಗ್ರಾಸವಾಗಿದ್ದ ಪಂಜಾಬ್ ನ್ಯಾಷನಲ್ ಬ್ಯಾಂಕ್ ಇದೀಗ ತನ್ನ ಉನ್ನತ ಅಧಿಕಾರಿಗಳಿಗೆ ದುಬಾರಿ ಆಡಿ ಕಾರುಗಳ ನೀಡುವ ಮೂಲಕ ಮತ್ತೆ ಸುದ್ದಿಗೆ ಗ್ರಾಸವಾಗಿದೆ.

ದೇಶದ ಎರಡನೇ ಆತೀ ದೊಡ್ಡ ಸಾಲ ನೀಡುವ ಪಂಜಾಬ್ ನ್ಯಾಷನಲ್ ಬ್ಯಾಂಕ್ ನೀರವ್ ಮೋದಿ ಪ್ರಕರಣದ ಬಳಿಕ ಇದೀಗ ಮತ್ತೊಮ್ಮೆ ಸುದ್ದಿಗೆ ಗ್ರಾಸವಾಗಿದೆ.  ಮೂಲಗಳ ಪ್ರಕಾರ ಸುಮಾರು 1.34 ಕೋಟಿ ರೂ ಮೌಲ್ಯದ ದುಬಾರಿ ಆಡಿ ಕಾರುಗಳನ್ನು ಬ್ಯಾಂಕ್ ನ ಉನ್ನತ ಅಧಿಕಾರಿಗಳು ಖರೀದಿ ಮಾಡಿದ್ದಾರೆ. ಬ್ಯಾಂಕ್ ಮೂಲಗಳ ಪ್ರಕಾರ ಬ್ಯಾಂಕ್ ಎಂಡಿ ಮತ್ತು ಇಬ್ಬರು ಹಿರಿಯ ನಿರ್ದೇಶಕರಿಗೆ ಈ ಕಾರುಗಳನ್ನು ನೀಡಲಾಗಿದೆ ಎಂದು ತಿಳಿದುಬಂದಿದೆ. 

ಈ ದುಬಾರಿ ಕಾರುಗಳ ಖರೀದಿಗೆ ಬ್ಯಾಂಕ್ ನ ಆಡಳಿತ ಮಂಡಳಿ ಒಪ್ಪಿಗೆ ನೀಡಿದ್ದು, ಬ್ಯಾಂಕ್ ನ ಅನುಪಯೋಗ ಬಜೆಟ್ ನಲ್ಲಿ ಮಿಕ್ಕ ಹಣದಿಂದ ಈ ಕಾರುಗಳನ್ನು ಖರೀದಿ ಮಾಡಲಾಗಿದೆ ಎನ್ನಲಾಗಿದೆ. ಈ ಹಿಂದೆ ಆಡಳಿತ ವರ್ಗಕ್ಕಾಗಿ ಮಾರುತಿ ಸುಜುಕಿ ಸಂಸ್ಥೆಯ ಸಿಯಾಜ್ ಮತ್ತು ಟೊಯೋಟಾ ಕೊರೋಲಾ ಆಲ್ಟಿಸ್ ಕಾರುಗಳನ್ನು ಬಳಕೆ ಮಾಡಲಾಗುತ್ತಿತ್ತು.  

ಕಳೆದ ವಾರವಷ್ಟೇ ಕೇಂದ್ರ ವಿತ್ತ ಸಚಿವಾಲಯ ಸಭೆ ನಡೆಸಿ ಕೋವಿಡ್-19 ಸಾಂಕ್ರಾಮಿಕ ಸಂದರ್ಭದಲ್ಲಿ ಅನಾವಶ್ಯಕ ವೆಚ್ಚಗಳಿಗೆ ಬ್ರೇಕ್ ಹಾಕುವಂತೆ ಸೂಚಿಸಿತ್ತು. ಇಂತಹ ಸಂದರ್ಭದಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಆಡಳಿತ ಮಂಡಳಿ ಬಳಕೆಯಾಗದ ನಿಧಿಯನ್ನು ಸರ್ಕಾರದ ಕೋವಿಡ್-19 ನಿಧಿಗೆ ನೀಡದೇ ಸುಖಾಸುಮ್ಮನೆ ದುಬಾರಿ ಕಾರುಗಳಿಗೆ ಖರ್ಚು ಮಾಡಿರುವುದು ಎಲ್ಲರ ಹುಬ್ಬೇರುವಂತೆ ಮಾಡಿದೆ.

ಈ ಹಿಂದೆ ಇದೇ ಸಂಸ್ಥೆ ಉದ್ಯಮಿ ನೀರವ್ ಮೋದಿ ತಮಗೆ ಬಹುಕೋಟಿ ವಂಚನೆ ಎಸಗಿದ್ದಾರೆ ಎಂದು ಆರೋಪಿಸಿತ್ತು. ಆದರೆ ಇದೇ ಸಂಸ್ಥೆ ಇದೀಗ ದುಬಾರಿ ಕಾರುಗಳಿಗೆ ಕೋಟ್ಯಂತರ ಹಣವನ್ನು ದುಂದು ವೆಚ್ಚ ಮಾಡಿ ಗ್ರಾಹಕರ ಕೆಂಗಣ್ಣಿಗೆ ಗುರಿಯಾಗಿದೆ.

SCROLL FOR NEXT