ವಾಣಿಜ್ಯ

ಯೆಸ್ ಬ್ಯಾಂಕ್ ನಿಂದ ಸಾಲ ಪಡೆದುಕೊಂಡಿದ್ದು ನಿಜ, ಮರು ಪಾವತಿಸಲು ಬದ್ಧ: ರಿಲಯನ್ಸ್ ಗ್ರೂಪ್

Lingaraj Badiger

ನವದೆಹಲಿ: ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಯೆಸ್ ಬ್ಯಾಂಕ್‌ನಿಂದ ತನ್ನ ಸಂಪೂರ್ಣ ಸಾಲವನ್ನು ಪಡೆದುಕೊಂಡಿದ್ದು, ಸಾಲ ಮರುಪಾವತಿಸಲು ಬದ್ಧ ಎಂದು ಅನಿಲ್ ಅಂಬಾನಿ ನೇತೃತ್ವದ ರಿಲಯನ್ಸ್ ಗ್ರೂಪ್ ಬುಧವಾರ ಹೇಳಿದೆ.

ಯೆಸ್ ಬ್ಯಾಂಕ್ ನಿಂದ ಪಡೆದುಕೊಂಡ ಎಲ್ಲಾ ಸಾಲವನ್ನು ಮರು ಪಾವತಿಸಲು ಬದ್ಧ ಮತ್ತು ಸಾಮಾನ್ಯ ವ್ಯವಹಾರದಲ್ಲಿಯೇ ಸಾಲ ಪಡೆಯಲಾಗಿದೆ. ಈ ಸಂಬಂಧ ಯೆಸ್ ಬ್ಯಾಂಕ್ ಮಾಜಿ ಸಿಇಒ ರಾಣಾ ಕಪೂರ್ ಅಥವಾ ಅವರ ಪತ್ನಿ, ಮಕ್ಕಳು, ಇತರೆ ಯಾವುದೇ ಸಂಬಂಧಿಗಳೊಂದಿಗೆ ನೇರ ಅಥವಾ ಪರೋಕ್ಷ ಸಂಪರ್ಕ ಹೊಂದಿಲ್ಲ ಎಂದು ರಿಲಯನ್ಸ್ ಗ್ರೂಪ್ ಪ್ರಕಟಣೆಯಲ್ಲಿ ತಿಳಿಸಿದೆ.

ರಿಲಯನ್ಸ್ ಗ್ರೂಪ್ ಸೇರಿದಂತೆ 10 ಬೃಹತ್ ಸಂಸ್ಥೆಗಳು ಯೆಸ್ ಬ್ಯಾಂಕ್ ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಗಿದ್ದು, ಅನಿಲ್ ಅಂಬಾನಿ ಒಡೆತನದ ಕನಿಷ್ಠ ಒಂಬತ್ತು ಕಂಪೆನಿಗಳು 12,800 ಕೋಟಿ ರೂಪಾಯಿ ಎನ್ ಪಿಎ(ಕೆಟ್ಟ ಸಾಲ), ಸುಬಾಶ್ ಚಂದ್ರ ಅವರ ಎಸ್ಸೆಲ್ ಗ್ರೂಪ್ ನ ಕನಿಷ್ಠ 16 ಕಂಪೆನಿಗಳು ಯೆಸ್ ಬ್ಯಾಂಕ್ ನಲ್ಲಿ 8, 400 ಕೋಟಿ ರೂಪಾಯಿ ಎನ್ ಪಿಎ ಹೊಂದಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಒಟ್ಟು 10 ದೊಡ್ಡ ಕಂಪೆನಿಗಳಿಗೆ ಸೇರಿದ 44 ಸಣ್ಣ ಕಂಪೆನಿಗಳು ಯೆಸ್ ಬ್ಯಾಂಕ್ ಒಟ್ಟು ಎನ್ ಪಿಎ ಪೈಕಿ 34 ಸಾವಿ ಕೋಟಿ ರೂಪಾಯಿಗೂ ಹೆಚ್ಚಾಗಿದೆ ಎಂದು ವರದಿ ಮಾಡಲಾಗಿದೆ.
 

SCROLL FOR NEXT