ವಾಣಿಜ್ಯ

ಕೊವಿಡ್-19 ನಿಂದ 30.3 ಲಕ್ಷ ಕೋಟಿ ರೂ. ಆರ್ಥಿಕ ನಷ್ಟ, ಮಹಾರಾಷ್ಟ್ರ, ತಮಿಳುನಾಡಿನಲ್ಲಿ ಹೆಚ್ಚು ಹಾನಿ: ವರದಿ

Lingaraj Badiger

ನವದೆಹಲಿ: ಮಹಾಮಾರಿ ಕೊರೋನಾ ವೈರಸ್ ನಿಂದಾಗಿ ದೇಶದ ಆರ್ಥಿಕತೆಗೆ ಭಾರಿ ಪೆಟ್ಟು ಬಿದ್ದಿದ್ದು, ಭಾರತ ಬರೋಬ್ಬರಿ 30.3 ಲಕ್ಷ ಕೋಟಿ ರೂಪಾಯಿ ನಷ್ಟ ಅನುಭವಿಸಿದ್ದು, ಇದು ಕೇಂದ್ರ ಸರ್ಕಾರ ಘೋಷಿಸಿದ ಕೊವಿಡ್-19 ಪರಿಹಾರ ಪ್ಯಾಕೇಜ್(20 ಲಕ್ಷ ಕೋಟಿ) ನ ಶೇ. 50ಕ್ಕಿಂತಲೂ ಹೆಚ್ಚು ಎಂದು ಎಸ್‌ಬಿಐ ಇಕೋವ್ರಾಪ್ ನ ಇತ್ತೀಚಿನ ವರದಿ ಹೇಳಿದೆ.

"ನಾವು ಪ್ರತಿ ರಾಜ್ಯದಲ್ಲೂ ಜಿಎಸ್ ಡಿಪಿಯಲ್ಲಿ ಜಿಲ್ಲಾವಾರು, ವಲಯವಾರು ನಷ್ಟವನ್ನು ಅಂದಾಜು ಮಾಡಿದ್ದೇವೆ ಮತ್ತು ರಾಜ್ಯಗಳಿಗೆ ಕೊವಿಡ್ -19 ರ ಕಾರಣದಿಂದಾಗಿ ಒಟ್ಟು 30.3 ಲಕ್ಷ ಕೋಟಿ ರೂ. ಆರ್ಥಿಕ ನಷ್ಟವಾಗಿದೆ. ಇದು ಜಿಎಸ್ ಟಿಯ ಶೇಕಡಾ 13.5 ರಷ್ಟಿದೆ" ಎಂದು ವರದಿ ವಿವರಿಸಿದೆ.

ಕೊರೋನಾ ವೈರಸ್ ಕಾರಣದಿಂದಾಗಿ ಎರಡು ತಿಂಗಳವರೆಗೆ ವಿಧಿಸಲಾದ ಲಾಕ್‌ಡೌನ್‌ನಿಂದ ಉಂಟಾದ ನಷ್ಟದ ಬಗ್ಗೆ ಅಧಿಕೃತ ಅಂದಾಜು ಇಲ್ಲ. ಆದರೆ ಅತಿ ಹೆಚ್ಚು ಕೊರೋನಾ ವೈರಸ್ ಪ್ರಕರಣಗಳನ್ನು ಹೊಂದಿರುವ ಮಹಾರಾಷ್ಟ್ರ, ತಮಿಳುನಾಡು ಮತ್ತು ಗುಜರಾತ್ ಜಿಡಿಪಿ ನಷ್ಟಕ್ಕೆ ಗರಿಷ್ಠ ಕೊಡುಗೆ ನೀಡಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

"ಅತಿ ಹೆಚ್ಚು ಕೊವಿಡ್-19 ಪ್ರಕರಣಗಳನ್ನು ಹೊಂದಿರುವ 10 ರಾಜ್ಯಗಳು ಒಟ್ಟು ಜಿಡಿಪಿಯ ಶೇ. 75 ರಷ್ಟು ನಷ್ಟ  ಹೊಂದಿದ್ದು, ಮಹಾರಾಷ್ಟ್ರವು ಒಟ್ಟು ನಷ್ಟದ ಶೇಕಡಾ 15.6 ರಷ್ಟ ಇದೆ, ನಂತರದ ಸ್ಥಾನಗಳಲ್ಲಿ ತಮಿಳುನಾಡು (9.4 ಶೇಕಡಾ) ಮತ್ತು ಗುಜರಾತ್ (8.6 ಶೇಕಡಾ) ಇವೆ. ಈ ಮೂರು ರಾಜ್ಯಗಳು ಭಾರತದಲ್ಲಿ ಅತಿ ಹೆಚ್ಚು ಕೊವಿಡ್-19 ಪ್ರಕರಣಗಳನ್ನು ಹೊಂದಿವೆ "ಎಂದು ಎಸ್‌ಬಿಐ ಸಮೂಹದ ಮುಖ್ಯ ಆರ್ಥಿಕ ಸಲಹೆಗಾರ ಸೌಮ್ಯ ಕಾಂತಿ ಘೋಷ್ ಬರೆದಿದ್ದಾರೆ.

SCROLL FOR NEXT