ವಾಣಿಜ್ಯ

125,000 ತಾತ್ಕಾಲಿಕ ಉದ್ಯೋಗಿಗಳಿಗೆ 'ಖಾಯಂ' ಮಾಡುವ ಆಫರ್ ನೀಡಿದ ಅಮೇಜಾನ್!

Srinivasamurthy VN

ವಾಷಿಂಗ್ಟನ್: ಮಾರಕ ಕೊರೋನಾ ವೈರಸ್ ಲಾಕ್ ಡೌನ್ ನಿಂದಾಗಿ ಆರ್ಥಿಕ ಚಟುವಟಿಕೆಗಳು ಸಂಪೂರ್ಣ ಸ್ಥಗಿತವಾಗಿ ಲಕ್ಷಾಂತರ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುತ್ತಿದ್ದರೆ. ಇದಕ್ಕೆ ವ್ಯತಿರಿಕ್ತ ಎಂಬಂತೆ ಖ್ಯಾತ ಇ-ಕಾಮರ್ಸ್ ಸಂಸ್ಥೆ ಅಮೇಜಾನ್ ತನ್ನ 125,000 ತಾತ್ಕಾಲಿಕ  ಉದ್ಯೋಗಿಗಳಿಗೆ 'ಖಾಯಂ' ಉದ್ಯೋಗದ ಅವಕಾಶ ನೀಡಿದೆ.

ಹೌದು.. ಲಾಕ್ ಡೌನ್ ಸಂದರ್ಭದಲ್ಲಿ ಅಮೇಜಾನ್ ಗೆ ಗಣನೀಯ ಪ್ರಮಾಣದಲ್ಲಿ ಆನ್ ಲೈನ್ ಶಾಪಿಂಗ್ ಆರ್ಡರ್ ಗಳು ಬಂದಿದ್ದು, ಈ ಆರ್ಡರ್ ಗಳ ರವಾನೆ ಮತ್ತು ಇತರೆ ಪ್ರಕ್ರಿಯೆಗಳಿಗಾಗಿ ಸುಮಾರು 125,000 ಉದ್ಯೋಗಿಗಳನ್ನು ತಾತ್ಕಾಲಿಕವಾಗಿ ಕೆಲಸಕೆ ತೆಗೆದುಕೊಂಡಿತ್ತು. ಆದರೆ  ಈಗ ಇದೇ ಉದ್ಯೋಗಿಗಳ ಕೆಲಸವನ್ನು ಖಾಯಂ (ಪರ್ಮನೆಂಟ್) ಮಾಡುವುದಾಗಿ ಸಂಸ್ಥೆ ಘೋಷಣೆ ಮಾಡಿದೆ.

ಮಾರ್ಚ್ ಬಳಿಕ ಅಮೇಜಾನ್ ವಹಿವಾಟು ಪ್ರಮಾಣದಲ್ಲಿ ಗಣನೀಯ ಏರಿಕೆ ಕಂಡಿದ್ದು, ಇದೇ ಕಾರಣಕ್ಕಾಗಿ ಸಂಸ್ಥೆ 75,000 ಹೊಸ ಉದ್ಯೋಗಿಗಳನ್ನು ಕೆಲಸಕ್ಕೆ ಸೇರಿಸಿಕೊಂಡಿತ್ತು. 

ಈ ಬಗ್ಗೆ ತನ್ನ ಬ್ಲಾಗ್ ನಲ್ಲಿ ಬರೆದುಕೊಂಡಿರುವ ಅಮೇಜಾನ್ ಸಂಸ್ಥೆ, ಇತರೆ ಸಂಸ್ಥೆಗಳಂತೆಯೇ ತಮ್ಮ ಸಂಸ್ಥೆ ಕೂಡ ಅಗತ್ಯಕ್ಕೆ ಅನುಗುಣವಾಗಿ ಹೊಸ ಸಿಬ್ಬಂದಿಗಳನ್ನು ತೆಗೆದುಕೊಳ್ಳುತ್ತಿದೆ. ಪ್ರಸ್ತುತ ಪರಿಸ್ಥಿತಿಗಳನ್ನು ಅವಲೋಕಿಸುತ್ತಿದ್ದರೆ, ಹಾಲಿ ಸಾಂಕ್ರಾಮಿಕ ದೀರ್ಘಕಾಲದವರೆಗೂ  ಇರುವ ಕುರಿತು ಶಂಕೆ ವ್ಯಕ್ತವಾಗುತ್ತಿದೆ. ಇದೇ ಕಾರಣಕ್ಕೆ ನಾವು ನಮ್ಮ 125,000 ತಾತ್ಕಾಲಿಕ ಉದ್ಯೋಗಿಗಳಿಗೆ ಪರ್ಮನೆಂಟ್ ಅವಕಾಶ ನೀಡುತ್ತಿದ್ದೇವೆ. ಇವರ ಫುಲ್ ಟೈಮ್ ಕೆಲಸ ಜೂನ್ ತಿಂಗಳಿನಿಂದ ಆರಂಭವಾಗುತ್ತದೆ ಎಂದು ಹೇಳಲಾಗಿದೆ. 

ಲಾಕ್‌ಡೌನ್ ಆರಂಭವಾದ ಸಮಯದಿಂದ ಆನ್‌ಲೈನ್ ಸರ್ವೀಸ್ ಹೆಚ್ಚು ಪರಿಣಾಮಕಾರಿಯಾಗಿದೆ. ಇದೀಗ ಎಲ್ಲರೂ ಆನ್‌ಲೈನ್ ಆರ್ಡರ್ ಮೊರೆ ಹೋಗುತ್ತಿದ್ದಾರೆ. ಇ ಕಾಮರ್ಸ್ ದಿಗ್ಗಜನಾಗಿ ಗುರುತಿಸಿಕೊಂಡಿರುವ ಅಮೇಜಾನ್, ಅಗತ್ಯ ವಸ್ತು, ದಿನಸಿ ವಸ್ತುಗಳ ಸೇವೆ ವಿಭಾಗ  ನಿರಂತರವಾಗಿ ಕಾರ್ಯನಿರ್ವಹಿಸಿತ್ತು. ಜನರ ಬೇಡಿಕೆ ಹೆಚ್ಚಾದಂತೆ ಅಮೇಜಾನ್ ಕೂಡ ಹೆಚ್ಚುವರಿ ಕೆಲಸ ಮಾಡಿ ಅಗತ್ಯ ವಸ್ತುಗಳ ಪೂರೈಕೆ ಮಾಡಿತ್ತು. ಲಾಕ್‌ಡೌನ್ ಸಡಿಲಿಕೆಯಾದರೂ ಜನರು ಹೆಚ್ಚಾಗಿ ಆನ್‌ಲೈನ್ ಸರ್ವೀಸ್ ನೆಚ್ಚಿಕೊಂಡಿದ್ದಾರೆ.

SCROLL FOR NEXT