ವಾಣಿಜ್ಯ

ಸಾಲಗಾರರಿಗೆ ದೀಪಾವಳಿ ಉಡುಗೊರೆ: 2 ಕೋಟಿ ರೂ. ವರೆಗಿನ ಸಾಲದ ಮೇಲಿನ ಚಕ್ರಬಡ್ಡಿ ಮನ್ನಾ

Lingaraj Badiger

ನವದೆಹಲಿ: ಕೇಂದ್ರ ಸರ್ಕಾರದ ಸಾಲಗಾರರಿಗೆ ದೀಪಾವಳಿ ಉಡುಗೊರೆ ನೀಡಿದ್ದು, 2 ಕೋಟಿ ರೂಪಾಯಿವರೆಗಿನ ಸಾಲದ ಮೇಲಿನ ಚಕ್ರಬಡ್ಡಿಯನ್ನು ಮನ್ನಾ ಮಾಡುವುದಾಗಿ ಶುಕ್ರವಾರ ರಾತ್ರಿ ಘೋಷಣೆ ಮಾಡಿದೆ.

ಕೊರೋನಾ ಲಾಕ್​ಡೌನ್ ವೇಳೆ ಪ್ರಕಟಿಸಲಾಗಿದ್ದ ಆರು ತಿಂಗಳ ಮೊರಟೋರಿಯಂ ಅವಧಿಯ ಸಾಲದ ಕಂತುಗಳ ಮೇಲಿನ ಚಕ್ರ ಬಡ್ಡಿ ಹಣವನ್ನು ತಾನೇ ಭರಿಸಲು ಕೇಂದ್ರ ಸರ್ಕಾರ ಒಪ್ಪಿದೆ.

ಸುಪ್ರೀಂ ಕೋರ್ಟ್ ಅಕ್ಟೋಬರ್ 14ರಂದು ಶೀಘ್ರದಲ್ಲಿ ಚಕ್ರಬಡ್ಡಿ ಮನ್ನಾ ಯೋಜನೆ ಜಾರಿಗೊಳಸಿ ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಹಣಕಾಸು ಇಲಾಖೆ ಸಾಲ ಮನ್ನಾ ಮಾರ್ಗಸೂಚಿಗಳನ್ನು ಹೊರತಂದಿದ್ದು, ಇದರಿಂದ ಸರ್ಕಾರಕ್ಕೆ 6,500 ಕೋಟಿ ರೂ. ಹೊರೆಯಾಗಲಿದೆ.

ಮಾರ್ಗಸೂಚಿಗಳ ಪ್ರಕಾರ, ಮಾರ್ಚ್ 1ರಿಂದ ಆಗಸ್ಟ್ 31ರವರೆಗಿನ ಆರು ತಿಂಗಳ ಮೊರಾಟೊರಿಯಂ ಅವಧಿಯಲ್ಲಿನ ನಿರ್ದಿಷ್ಟ ಸಾಲಗಳಿಗೆ ಈ ಯೋಜನೆ ಅನ್ವಯ ಆಗುತ್ತದೆ.

ವಸತಿ ಸಾಲ, ಶಿಕ್ಷಣ ಸಾಲ, ಕ್ರೆಡಿಟ್ ಕಾರ್ಡ್ ಬಾಕಿ, ವಾಹನ ಸಾಲ, ಎಂಎಸ್‌ಎಂಇ ಸಾಲ ಮತ್ತು ಬಳಕೆ ಸಾಲಗಳನ್ನು ಈ ಯೋಜನೆಯ ವ್ಯಾಪ್ತಿಗೆ ಒಳಪಡಿಸಲಾಗಿದೆ.

ಲೋನ್ ಮೊರಟೋರಿಯಂ ಅವಧಿಯಲ್ಲಿನ ನಿರ್ದಿಷ್ಟ ಸಾಲಗಳ ಮರುಪಾವತಿ ಕಂತುಗಳಿಗೆ ಸರ್ಕಾರದ ಚಕ್ರಬಡ್ಡಿ ಮನ್ನಾ ಯೋಜನೆ ಅನ್ವಯವಾಗಲಿದೆ. ಸರಳ ಬಡ್ಡಿ ಮತ್ತು ಚಕ್ರಬಡ್ಡಿ ನಡುವಿನ ವ್ಯತ್ಯಾಸ ಹಣವನ್ನು ಮಾತ್ರ ಕೇಂದ್ರ ಭರಿಸುತ್ತದೆ. ಅಂದರೆ, ಹೆಚ್ಚುವರಿ ಬಡ್ಡಿ ಮಾತ್ರ ಮನ್ನಾ ಆಗುತ್ತದೆ. ಸಾಲಗಾರರು ತಮ್ಮ ಇಎಂಐ ಮೇಲಿನ ಮಾಮೂಲಿಯ ಸರಳ ಬಡ್ಡಿಯನ್ನು ಕಟ್ಟಲೇ ಬೇಕಾಗುತ್ತದೆ. ಗ್ರಾಹಕರಿಗೆ ಬಡ್ಡಿಯ ಮೇಲೆ ಬಡ್ಡಿಯ ಹೊರೆ ಬೀಳುವುದಿಲ್ಲ ಅಷ್ಟೇ.

SCROLL FOR NEXT